ANJANADRI ANJANEYA TEMPLE: ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯ ದೇಗುಲ ನಿರ್ಮಾಣಕ್ಕೆ ಹೈಕೋರ್ಟ್ ತಡೆ

ಅಮರಾವತಿ: ತಿರುಪತಿ ತಿರುಮಲದ ಏಳು ಬೆಟ್ಟಗಳಲ್ಲಿ ಒಂದಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಹನುಮಾನ್ ದೇವಸ್ಥಾನ ನಿರ್ಮಾಣಕ್ಕೆ ಆಂಧ್ರ ಪ್ರದೇಶ ಹೈಕೋರ್ಟ್ ತಡೆ ನೀಡಿದೆ.
ಅಂಜನಾದ್ರಿ ಬೆಟ್ಟದಲ್ಲಿ ದೇಗುಲ ನಿರ್ಮಿಸದಂತೆ ಮತ್ತು ಆಂಜನೇಯನ ಪ್ರತಿಮೆ ನಿರ್ಮಾಣ ಮಾಡದಂತೆ ಆಂಧ್ರಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಗೆ(ಟಿಟಿಡಿ) ಹಿನ್ನಡೆಯಾಗಿದೆ.
ಅಭಿವೃದ್ಧಿ ಕಾರ್ಯಗಳಿಗೆ ಓಕೆ.. ದೇಗುಲ ನಿರ್ಮಾಣಕ್ಕೆ ಬ್ರೇಕ್!
ಪುರಾಣಗಳ ಪ್ರಕಾರ ತಿರುಮಲದ ಏಳು ಬೆಟ್ಟದಲ್ಲಿ ಯಾವುದೇ ಪ್ರತಿಮೆಯನ್ನು ಸ್ಥಾಪಿಸಬಾರದು. ಜೊತೆಗೆ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಅಂಜನಾದ್ರಿ ಬೆಟ್ಟದಲ್ಲಿ ದೇಗುಲ ನಿರ್ಮಿಸಬಾರದು ಎಂದು ಕರ್ನೂಲ್‌ನ ಅಗ್ರಹಾರಂ ರಾಘವೇಂದ್ರ ಸೇರಿದಂತೆ ಹಲವರು ಆಂಧ್ರ ಪ್ರದೇಶ ಹೈಕೋರ್ಟ್ ಗೆ ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಂಜನಾದ್ರಿಯಲ್ಲಿ ಹೊಸ ದೇಗುಲ ಮತ್ತು ವಿಗ್ರಹ ನಿರ್ಮಾಣಕ್ಕೆ ತಡೆ ನೀಡಿದೆ. ಆದರೆ ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿದೆ. ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳವೆಂದು ಸಾಬೀತುಪಡಿಸುವ ದಾಖಲೆಗಳೊಂದಿಗೆ ವಾದ ಮಂಡಿಸಲು ಟಿಟಿಡಿಗೆ ಹೈಕೋರ್ಟ್ ಅವಕಾಶ ನೀಡಿದ್ದು, ವಿಚಾರಣೆಯನ್ನು ಮುಂದೂಡಿದೆ. ಆಂಜನೇಯನ ಜನ್ಮಸ್ಥಳ ವಿವಾದ ಈಗ ಅಧಿಕೃತವಾಗಿ ಹೈಕೋರ್ಟ್ ಮೆಟ್ಟಿಲೇರಿದೆ.
೩೦ ಅಡಿ ಹನುಮನ ಮೂರ್ತಿ ಸ್ಥಾಪಿಸಲು ಮುಂದಾಗಿದ್ದ ಟಿಟಿಡಿ
ಮಾಘ ಹುಣ್ಣಿಮೆಯಂದು ಅಂದರೆ ಫೆಬ್ರವರಿ ೧೬ರಂದು ಅಂಜನಾದ್ರಿ ಬೆಟ್ಟದಲ್ಲಿ ಭವ್ಯ ಹನುಮಾನ್ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿತ್ತು. ದೇಗುಲದ ನೀಲ ನಕ್ಷೆಯನ್ನೂ ಬಿಡುಗಡೆ ಮಾಡಲಾಗಿದ್ದು, ಆಂಜನೇಯ ಅಂಜನಾದ್ರಿ ಬೆಟ್ಟದಲ್ಲೇ ಹುಟ್ಟಿದ್ದು ಎಂಬುದನ್ನು ಪ್ರತಿಪಾದಿಸುವ ಕೈಪಿಡಿಗಳನ್ನು ಸಹ ಹೊರತರಲಾಗಿದೆ. ಅಲ್ಲದೆ, ದೇಗುಲ ಸಂಕೀರ್ಣದಲ್ಲಿ ೩೦ ಅಡಿ ಎತ್ತರದ ಹನುಮಂತನ ಮೂರ್ತಿಯನ್ನು ಸ್ಥಾಪಿಸಲು ಟಿಟಿಡಿ ಉದ್ದೇಶಿಸಿತ್ತು. ಸದ್ಯ ದೇಗುಲ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಆ ಪ್ರದೇಶದಲ್ಲಿ ದೇವಾಲಯ ಹಾಗೂ ಪ್ರತಿಮೆ ಸ್ಥಾಪನೆ ಚಟುವಟಿಕೆಗಳನ್ನು ತಿರುಪತಿ ತಿರುಮಲ ದೇವಸ್ಥಾನಂ ಮಂಡಳಿ ನಡೆಸುವಂತಿಲ್ಲ.
ಹೈಕೋರ್ಟ್ ತಡೆಯಾಜ್ಞೆ ಬಗ್ಗೆ ಟಿಟಿಡಿ ಹೇಳೋದೇನು..?
ಕಳೆದ ವರ್ಷದ ಜುಲೈನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅಂಜನಾದ್ರಿ ಬೆಟ್ಟದಲ್ಲಿನ ಆಕಾಶಗಂಗಾ ಪ್ರದೇಶವೇ ಹನುಮನ ಜನ್ಮಸ್ಥಳ ಎನ್ನುವು­ದಕ್ಕೆ ನಮಗೆ ಹಲವು ಅಧಿಕೃತ ಪುರಾವೆಗಳು ಸಿಕ್ಕಿವೆ ಎಂಬುದು ಟಿಟಿಡಿಯ ವಾದವಾಗಿದೆ.

ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದು ಟಿಟಿಡಿಯ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ತಿಳಿಸಿದ್ದಾರೆ.
ಸ್ವಾಮಿ ಗೋವಿಂದಾನAದ ಸರಸ್ವತಿ ಶ್ರೀಗಳ ಮುಂದಿನ ನಡೆ ಏನು..?
ಅಂಜನಾದ್ರಿ ಪರ್ವತವೇ ಹನುಮಂತನ ಜನ್ಮಸ್ಥಳ ಎನ್ನುವುದಕ್ಕೆ ತನ್ನ ಬಳಿ ಇರುವ ದಾಖಲೆಗಳನ್ನು ಟಿಟಿಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಾದ ಮಂಡಿಸುವ ಸಾಧ್ಯತೆಗಳಿವೆ.

ಇದರ ಬೆನ್ನಲ್ಲೇ ಶ್ರೀ ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೂಡ ಹೈಕೋರ್ಟ್ನಲ್ಲಿ ವಾದ ಮಂಡಿಸಲು ಮುಂದಾಗಿದೆ.

ಇದಕ್ಕೆ ಈಗಾಗಲೇ ಶ್ರೀ ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸ್ಥಾಪಕ ಸ್ವಾಮಿ ಗೋವಿಂದಾನಂದ ಸರಸ್ವತಿ ಶ್ರೀಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

More News