ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಕಲಾತಪಸ್ವಿ’ ಡಾ.ರಾಜೇಶ್ (೮೯ ವರ್ಷ) ಅವರು ಇಹಲೋಕ ತ್ಯಜಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ರಾಜೇಶ್ ಅವರು ಬೆಂಗಳೂರಿನ ಕಸ್ತೂರ್ಬಾ ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ೨.೩೦ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
೮೯ ವರ್ಷ ವಯಸ್ಸಿನ ರಾಜೇಶ್ ಅವರು ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಟ ರಾಜೇಶ್ ಬೆಂಗಳೂರಿನಲ್ಲೇ ಜನಿಸಿದವರು. ಇವರ ಮೂಲ ಹೆಸರು ಮುನಿ ಚೌಡಪ್ಪ. ಚಿಕ್ಕವಯಸ್ಸಿನಲ್ಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮುನಿ ಚೌಡಪ್ಪ ಅವರು ರಂಗಭೂಮಿ ಪ್ರವೇಶಿಸಿದರು. ಸುದರ್ಶನ ನಾಟಕ ಮಂಡಳಿ' ಸೇರಿದ ಮುನಿ ಚೌಡಪ್ಪ ರಂಗಭೂಮಿಯಲ್ಲಿವಿದ್ಯಾಸಾಗರ್’ ಹೆಸರಿನಿಂದ ಗುರುತಿಸಿಕೊಂಡರು.
ಬಳಿಕ ತಮ್ಮದೇ ಆದ ಶಕ್ತಿ ನಾಟಕ ಮಂಡಳಿ'ಯನ್ನು ವಿದ್ಯಾಸಾಗರ್ (ರಾಜೇಶ್) ಆರಂಭಿಸಿದರು. ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾ ದೀಪ, ಚಂದ್ರೋದಯ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ನಾಟಕಗಳ ಮೂಲಕ ವಿದ್ಯಾಸಾಗರ್ ಗಮನ ಸೆಳೆದರು. ನಟನಾಗುವ ಇಚ್ಛೆ ಹೊಂದಿದ್ದ ಹಿರಿಯ ನಟ ರಾಜೇಶ್ ಅವರು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರ ಲಿಪಿ ಮತ್ತು ಬೆರಳಚ್ಚುಗಾರರಾಗಿ ಕೆಲಸ ಆರಂಭಿಸಿದರು. ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವಿದ್ಯಾಸಾಗರ್ ಅವರನ್ನುವೀರ ಸಂಕಲ್ಪ’ ಸಿನಿಮಾದ ಮೂಲಕ ಹುಣಸೂರು ಕೃಷ್ಣಮೂರ್ತಿ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.

೧೫ ದಿನ ಕೆಲಸಕ್ಕೆ ರಜೆ ಹಾಕಿ ಮದ್ರಾಸ್‌ಗೆ ತೆರಳಿದ ವಿದ್ಯಾಸಾಗರ್ (ರಾಜೇಶ್) ವೀರ ಸಂಕಲ್ಪ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ವಿದ್ಯಾಸಾಗರ್‌ಗೆ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದವು. ಶ್ರೀ ರಾಮಾಂಜನೇಯ ಯುದ್ಧ, ಗಂಗೆ ಗೌರಿ ಚಿತ್ರಗಳಲ್ಲೂ ಹಿರಿಯ ನಟ ರಾಜೇಶ್ ಅಭಿನಯಿಸಿದರು.
೧೯೬೮ರಲ್ಲಿ ತೆರೆಕಂಡ ನಮ್ಮ ಊರು ಚಿತ್ರದಲ್ಲಿ ತಮ್ಮ ಹೆಸರನ್ನು ವಿದ್ಯಾಸಾಗರ್ ಯಿಂದ ರಾಜೇಶ್ ಎಂದು ಬದಲಾಯಿಸಿಕೊಂಡರು. ನಟ ರಾಜೇಶ್ ಅವರ ವೃತ್ತಿ ಬದುಕಿಗೆ ನಮ್ಮ ಊರು ಚಿತ್ರ ದೊಡ್ಡ ತಿರುವು ಕೊಟ್ಟಿತು. ಸಿ.ವಿ.ಶಿವಶಂಕರ್ ನಿರ್ದೇಶನದ ನಮ್ಮ ಊರು ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಟ ರಾಜೇಶ್ ಗಾಯಕರಾಗಿಯೂ ಜನಪ್ರಿಯತೆ ಪಡೆದರು.

ನಮ್ಮ ಊರು, ಗಂಗೆ ಗೌರಿ, ಸತೀ ಸುಕನ್ಯ, ಬೆಳುವಲದ ಮಡಿಲಲ್ಲಿ, ಕಪ್ಪು ಬಿಳುಪು, ಬೃಂದಾವನ, ಬೋರೆ ಗೌಡ ಬೆಂಗಳೂರಿಗೆ ಬಂದ, ಮರೆಯದ ದೀಪಾವಳಿ, ಪ್ರತಿಧ್ವನಿ, ಕಾವೇರಿ, ದೇವರ ಗುಡಿ, ಬದುಕು ಬಂಗಾರವಾಯ್ತು, ಸೊಸೆ ತಂದ ಸೌಭಾಗ್ಯ, ಮುಗಿಯದ ಕಥೆ, ಬಿಡುಗಡೆ, ದೇವರದುಡ್ಡು, ಕಲಿಯುಗ, ಪಿತಾಮಹ ಸೇರಿದಂತೆ ೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಿರಿಯ ನಟ ರಾಜೇಶ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.




