ಮಾಸ್ಕೋ: ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ ಕೆಲವೇ ಹೊತ್ತಿನಲ್ಲಿ ಅಲ್ಲಿನ ಪೂರ್ವ ಬಂದರು ನಗರವಾದ ಮರಿಯುಪೋಲ್‌ನಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿವೆ.
ಬುಧವಾರ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪುಟಿನ್ ಉಕ್ರೇನ್‌ನ ಪ್ರದೇಶಗಳನ್ನು ಹಾಗೂ ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳುವುದು ನಮ್ಮ ಯೋಜನೆಯಲ್ಲ. ಉಕ್ರೇನ್‌ನ ಮಿಲಿಟರಿ ಶಕ್ತಿಯನ್ನು ಮಟ್ಟ ಹಾಕುವುದು ಮತ್ತು ಉಕ್ರೇನ್ ನ ನಾಜಿ ತತ್ವವನ್ನು ತೊಡೆದು ಹಾಕುವುದು ಹಾಗೂ ನಮ್ಮ ದೇಶದ ಜನರ ರಕ್ಷಣೆ ನಮ್ಮ ಗುರಿಯಾಗಿದೆ, ಉಕ್ರೇನ್ ಕಡೆಯಿಂದ ಬೆದರಿಕೆ ಇರುವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇದು ಪ್ರತೀಕಾರದ ಕ್ರಮವಾಗಿದೆ ಎಂದು ಪುಟಿನ್ ಹೇಳಿದ್ದಾರೆ.
ಮಧ್ಯ ಪ್ರವೇಶಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಗೆ ಪುಟಿನ್ ನೇರ ಎಚ್ಚರಿಕೆ
ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಿಸಿರುವ ರಷ್ಯಾದ ನಡೆಯನ್ನು ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳು ಖಂಡಿಸಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
`ನಮ್ಮ ದೇಶ ಮತ್ತು ನಮ್ಮ ಜನರಿಗೆ ಬೆದರಿಕೆ ಉಂಟು ಮಾಡಲು ನೋಡಿದರೆ ಮತ್ತು ನಮ್ಮ ವಿಷಯದಲ್ಲಿ ಮಧ್ಯ ಪ್ರವೇಶಿಸಲು ಪ್ರಯತ್ನಿಸುವ ಯಾರಿಗಾದರೂ ರಷ್ಯಾದಿಂದ ಪ್ರತಿಕ್ರಿಯೆ ತಕ್ಷಣವೇ ಬರುತ್ತದೆ. ಇತಿಹಾಸದಲ್ಲಿ ನೀವು ಹಿಂದೆಂದೂ ಅನುಭವಿಸದಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಗತ್ತಿನ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತುರ್ತು ಪರಿಸ್ಥಿತಿ ಘೋಷಿಸಿದ ಉಕ್ರೇನ್ ಸರ್ಕಾರ: ದೇಶದಲ್ಲಿನ ವಿಮಾನ ನಿಲ್ದಾಣಗಳು ಬಂದ್
ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಿಸಿರುವ ಬೆನ್ನಲ್ಲೇ ಉಕ್ರೇನ್ ಸರ್ಕಾರ ಪೂರ್ವ ಉಕ್ರೇನ್ ನಲ್ಲಿರುವ ವಿಮಾನ ನಿಲ್ದಾಣಗಳನ್ನು ಮಧ್ಯರಾತ್ರಿಯಿಂದ ಬಂದ್ ಮಾಡಿದೆ.

ರಷ್ಯಾದ ವಾಯುಯಾನ ಅಧಿಕಾರಿಗಳು ವಾಯುಪ್ರದೇಶದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಉಕ್ರೇನಿಯನ್ ವಾಯುಯಾನದ ಅಧಿಕಾರಿಗಳು ಪೂರ್ವ ಭಾಗದಲ್ಲಿ ಕೆಲವು ವಾಯುಪ್ರದೇಶಗಳನ್ನು ಅಪಾಯಕಾರಿ ಪ್ರದೇಶಗಳು ಎಂದು ಘೋಷಿಸಿದ್ದಾರೆ.
ಕೂಡಲೇ ಉಕ್ರೇನ್ ತೊರೆಯುವಂತೆ ಭಾರತದ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ಮನವಿ
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದೋನ್ಮಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಸ್ವದೇಶಕ್ಕೆ ಮರಳುವಂತೆ ಉಕ್ರೇನ್ ನ ಕೈವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ. ದೇಶಕ್ಕೆ ಮರಳುವಂತೆ ಭಾರತೀಯ ರಾಯಭಾರ ಕಚೇರಿ 3ನೇ ಬಾರಿಗೆ ಮನವಿ ಮಾಡುತ್ತಿದೆ.

ಉಕ್ರೇನ್ ಮತ್ತು ಅದರ ಗಡಿ ಪ್ರದೇಶಗಳಲ್ಲಿ ೨೦ ಸಾವಿರಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಅವರನ್ನು ಸ್ವದೇಶಕ್ಕೆ ಮರಳಿ ಕರೆತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ.

ಅಲ್ಲಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆ ತರುವ ನಿಟ್ಟಿನಲ್ಲಿ ಉಕ್ರೇನ್ ನಲ್ಲಿ ಮೂರು ಏರ್ ಇಂಡಿಯಾ ವಿಮಾನಗಳನ್ನು ನಿಯೋಜಿಸಲಾಗಿದ್ದು, ಮೊದಲನೇ ಹಂತದ ವಿಮಾನ ಮಂಗಳವಾರ ಬೆಳಗ್ಗೆ 7:36ಕ್ಕೆ ನವದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಹೊರಟಿದೆ.

ಗುರುವಾರ ಬೆಳಗ್ಗೆ ಮತ್ತೊಂದು ಏರ್ ಇಂಡಿಯಾ ವಿಶೇಷ ವಿಮಾನವನ್ನು ಉಕ್ರೇನ್‌ಗೆ ಕಳುಹಿಸಲಾಗಿದ್ದು, ಉಕ್ರೇನ್ ನ ಖಾರ್ಕಿವ್ ನಲ್ಲಿ ನೆಲೆಸಿರೋ 256 ಭಾರತೀಯ ವಿದ್ಯಾರ್ಥಿಗಳು ಇಂದು ದೇಶಕ್ಕೆ ಮರಳಲಿದ್ದಾರೆ.




