IMMORAL GOVEERNMENT IN STATE: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತ ವಾತಾವರಣವಿದೆ: ರಾಜ್ಯದಲ್ಲಿ ಅನೈತಿಕ ಸರ್ಕಾರವಿದೆ: ಕಾಂಗ್ರೆಸ್

ನವದೆಹಲಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ವರ್ಷವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಉಭಯ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಈಗಿನ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದು ಒಂದು ಅನೈತಿಕ ಸರ್ಕಾರವಾಗಿ ನಡೀತಾ ಇದೆ. ಕಳೆದ ಎರಡೂವರೆ ವರ್ಷಗಳಿಂದ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಅಭಿವೃದ್ಧಿ ಕೆಲಸ ಮಾಡದ ಸರ್ಕಾರಕ್ಕೆ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ. ಜನ ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೊಂದು ನಿಷ್ಕ್ರಿಯ, ಭ್ರಷ್ಟ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೊವಿಡ್ 19 ಅನ್ನು ಕೂಡ ಸರಿಯಾಗಿ ನಿಭಾಯಿಸದೆ ಎರಡನೇ ಅಲೆಯಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ. ಇದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಆರೋಪಿಸಿದರು.
ಹೀಗಾಗಿ ರಾಹುಲ್ ಗಾಂಧಿ ಅವರು ರಾಜ್ಯದ ಸುಮಾರು 16 ಜನ ಹಿರಿಯ ನಾಯಕರನ್ನು ದೆಹಲಿಗೆ ಕರೆದು ಸಭೆ ನಡೆಸಿ ರಾಜ್ಯದ ಸದ್ಯದ ಸ್ಥಿತಿಗತಿ, ಮುಂದೆ ನಾವು ಗೆಲ್ಲಬೇಕಾದರೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಬಗ್ಗೆ ಚರ್ಚೆ, ಗೆಲ್ಲುವ ಅವಕಾಶ ಇರುವುದರಿಂದ ಎಚ್ಚರ ತಪ್ಪದೆ ಕೆಲಸ ಮಾಡಬೇಕು ಎಂಬ ಸಲಹೆ ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಅಗತ್ಯವಿರುವ ಬೆಂಬಲ, ಸಹಕಾರವನ್ನು ತಾವು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಂದೇಶ ಸಿಕ್ಕಂತಿದೆ. ಹಾಗಾಗಿ ಅವರು ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಇತರೆ ಎಲ್ಲಾ ನಾಯಕರು ಒಗ್ಗೂಡಿ, ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂಬ ಮಾಹಿತಿ ನಮಗಿದೆ ಎಂದು ಅವರು ಹೇಳಿದರು.
ರಾಷ್ಟ್ರಧ್ವಜದ ಬಗ್ಗೆ ಅವಮಾನ ಈಶ್ವರಪ್ಪರನ್ನು ವಜಾ ಮಾಡಿಲ್ಲ
ಬಿಜೆಪಿ ಅವರಿಗೆ ರಾಷ್ಟ್ರದ ಬಗ್ಗೆ ಪ್ರೀತಿ, ಗೌರವ ಇಲ್ಲ. ಸಚಿವ ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೂ ಅವರನ್ನು ಸಂಪುಟದಿಂದ ವಜಾ ಮಾಡಿಲ್ಲ. ಅವರ ಹೇಳಿಕೆ ಸಂಪೂರ್ಣ ತಪ್ಪು, ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಸರಿಯಾಗಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹೇಳಿದ್ದಾರೆ. ಇಷ್ಟೆಲ್ಲಾ ಆದರೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆ ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆಯಾದಾಗ ಆತನ ಶವಯಾತ್ರೆಯ ಮುಂದಾಳತ್ವ ವಹಿಸಿದ್ದು ಈಶ್ವರಪ್ಪ ಅವರು. ಅಲ್ಲಿ 144 ಸೆಕ್ಷನ್ ಹಾಕಿದ್ದು ಬಿಜೆಪಿ ಸರ್ಕಾರ, ಅದನ್ನು ಉಲ್ಲಂಘನೆ ಮಾಡಿದ್ದು ಬಿಜೆಪಿ ಸರ್ಕಾರದ ಸಚಿವರೆ. ಇದಕ್ಕಾಗಿ ಈಶ್ವರಪ್ಪ ಮೇಲೆ ಒಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಿತ್ತು. ಅದನ್ನೂ ಮಾಡಿಲ್ಲ. ಹಾಗಾಗಿ ನಾವು ರಾಜ್ಯಪಾಲರನ್ನು ಭೇಟಿಯಾಗಿ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಮನವಿ ಪತ್ರ ನೀಡಿದ್ದೆವು. ಮೇಲ್ನೋಟಕ್ಕೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವುದು ಗೊತ್ತಾಗುತ್ತಿದೆ ಎಂದು ಟಿಕೀಸಿದರು.
ಈ ಕೆಲಸವನ್ನು ಯಾರೇ ಮಾಡಿದರು ಅದು ಅಪರಾಧ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದು ಎಂದು ಕಾನೂನಿದೆ. ಜೆ.ಪಿ ನಡ್ಡಾ ಅವರೇ ಈಶ್ವರಪ್ಪ ಅವರ ರಾಷ್ಟ್ರ ದ್ರೋಹದ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪಕ್ಷದ ತಾಲೂಕು, ಜಿಲ್ಲೆಗಳ ಕಾರ್ಯಕರ್ತರು ಹೋರಾಟ ಮಾಡಿ, ತಹಶಿಲ್ದಾರರು, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ, ಅದು ಹೀಗೆಯೇ ಮುಂದುವರೆಯುತ್ತೆ.
ಜನಪರ ಯೋಜನೆಗಾಗಿ ಪಾದಯಾತ್ರೆ
ಇಂಥದ್ದೊಂದು ಜನಪರ ಯೋಜನೆ ಜಾರಿಯಾಗಬೇಕು ಎಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಇದು ರಾಜಕೀಯ ಪಾದಯಾತ್ರೆ ಅಲ್ಲ, ಅದಕ್ಕಾಗಿ ಎಲ್ಲಾ ಸಂಘ ಸಂಸ್ಥೆಗಳು, ಕಾರ್ಮಿಕ ಸಂಘಗಳು, ರೈತರು, ಕೂಲಿ ಕಾರ್ಮಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ನೇತ್ರತ್ವ ವಹಿಸಿದ್ದು ಬಿಟ್ಟರೆ ಇದು ಎಲ್ಲರ ಹೋರಾಟ ಎಂದರು.
ಜನವರಿ 9 ರಿಂದ ಪಾದಯಾತ್ರೆ ಆರಂಭಿಸಿ ನಾಲ್ಕು ದಿನ ನಡೆದಿದ್ದೆವು, ಆ ವೇಳೆಗೆ ಕೊರೊನಾ ಮೂರನೇ ಅಲೆ ಆರಂಭವಾಗಿತ್ತು, ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ರಾಮನಗರ ತಲುಪಿದ ಮೇಲೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೆವು. ಮತ್ತೆ ಅಲ್ಲಿಂದಲೇ ಪಾದಯಾತ್ರೆ ಆರಂಭ ಮಾಡೋಣ ಎಂದು ನಾನು, ಅಧ್ಯಕ್ಷರು ತೀರ್ಮಾನ ಮಾಡಿದ್ದೆವು. ಬಜೆಟ್ ಅಧಿವೇಶ ಮಾರ್ಚ್ ನಲ್ಲಿ ಆರಂಭವಾಗುತ್ತಿದ್ದು, ಅದಕ್ಕಾಗಿ ಈ ತಿಂಗಳ 27 ರಿಂದಲೇ ಪಾದಯಾತ್ರೆ ಮಾಡೋಣ ಎಂದು ನಿರ್ಧರಿಸಿದ್ದೇವೆ ಎಂದು ವಿವರಿಸಿದರು.
ಬೆಂಗಳೂರು ನಗರದಲ್ಲಿ 5 ದಿನದ ಬದಲು ಮೂರೇ ದಿನ ಪಾದಯಾತ್ರೆ ಮಾಡುತ್ತೇವೆ. 3 ನೇ ತಾರೀಖಿನಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಭೆ ನಡೆಸಿ ಪಾದಯಾತ್ರೆ ಮುಕ್ತಾಯ ಮಾಡುತ್ತೇವೆ. ಇದು ಪ್ರತಿಷ್ಠೆಗಾಗಿ ನಡೆಸುತ್ತಿರೋದಲ್ಲ. ಅಂತರ್ಜಲ ಮಟ್ಟ ಹೆಚ್ಚಾಗುತ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸಿಗುತ್ತದೆ ಎಂದರು.


ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಬಿನಿ, ಕೆ‌ಆರ್‌ಎಸ್, ಹೇಮಾವತಿ, ಹಾರಂಗಿ ಮೇಲಿನ ಒತ್ತಡ ಕಡಿಮೆಯಾಗುತ್ತೆ. ಬೇಸಿಗೆಯಲ್ಲಿ ಈ ಅಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ಮೇಕೆದಾಟು ಇಂದ ಬಿಡಬಹುದು. ಇದರಿಂದ ತಮಿಳುನಾಡಿಗೆ ಏನೇನೂ ತೊಂದರೆಯಾಗಲ್ಲ, ರಾಜಕೀಯ ಕಾರಣಕ್ಕೆ ಅವರು ತಕರಾರು ಮಾಡುತ್ತಿದ್ದಾರೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳುನಾಡಿಗೆ ಹೋಗುತ್ತೆ. ಎರಡೂ ರಾಜ್ಯಗಳಿಗೆ ಇದರಿಂದ ಅನುಕೂಲ ಇದೆ. ಪರಿಸರ ಅನುಮತಿ ಪತ್ರ ಪಡೆಯಲು ಎರಡೂವರೆ ವರ್ಷ ಬೇಕ? ಇದೊಂದು ಜನಪರವಾದ ಯೋಜನೆ, ಹಾಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ.
ಪಾದಯಾತ್ರೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೇವೆ. ತಮಿಳುನಾಡಿಗೆ ಅವರ ಪಾಲಿನ ನೀರು ಕೊಡುವುದಾಗಿ ಒಪ್ಪಿಕೊಂಡಿದ್ದೇವೆ, ಅಷ್ಟೆ. ಬೇರೇನು ಸಮಸ್ಯೆ? ಎಷ್ಟು ಅರಣ್ಯ ಮುಳುಗಡೆ ಆಗುತ್ತದೋ ಅಷ್ಟೇ ಪ್ರಮಾಣದ ಜಮೀನನ್ನು ನೀಡಲು ನಾವು ಒಪ್ಪಿಕೊಂಡಿದ್ದೇವೆ. ಮೇಧಾ ಪಾಟ್ಕರ್ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಅನ್ನಿಸುತ್ತೆ ಎಂದರು.
ತಮಿಳುನಾಡಿಗೆ ಯೋಜನೆ ಬಗ್ಗೆ ತಕರಾರು ಮಾಡಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ಕಾವೇರಿ ವಿವಾದವನ್ನು ಜೀವಂತವಾಗಿಡಲು ತಮಿಳುನಾಡಿನ ಪಕ್ಷಗಳು ಪ್ರಯತ್ನ ಮಾಡುತ್ತಿವೆ.

ಯುಕ್ರೇನ್ ನಿಂದ ರಾಜ್ಯದ ಮತ್ತು ದೇಶದ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು ಕೇಂದ್ರ ಸರ್ಕಾರದ ಹೊಣೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಮತ್ತು ರಾಹುಲ್ ಗಾಂಧಿ ಅವರ ಜೊತೆ ಮಾತನಾಡುತ್ತೇನೆ. ಯುಕ್ರೇನ್ ನಲ್ಲಿರುವ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಕೆಲಸ ಕೇಂದ್ರದ್ದು. ರಾಜ್ಯಗಳು ಈ ಕಾರ್ಯಾಚರಣೆಗೆ ಆರ್ಥಿಕ ಸಹಾಯ ಮಾಡಬಹುದು ಅಷ್ಟೆ.

More News