ರಾಮನಗರದಿಂದ ಮೇಕೆದಾಟು ಪಾದಯಾತ್ರೆ ಆರಂಭ: `ಕೈ’ ನಾಯಕರ ಹೋರಾಟಕ್ಕೆ ಸುರ್ಜೆವಾಲಾ ಸಾಥ್

ರಾಮನಗರ: ಕರೊನಾ, ವೀಕೆಂಡ್ ಕರ್ಫ್ಯೂನಿಂದ ಸ್ವಲ್ಪ ದಿನ ಗ್ಯಾಪ್ ಕೊಟ್ಟಿದ್ದ ಕಾಂಗ್ರೆಸ್ ನಾಯಕರು ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಚಾಲನೆ ನೀಡಿದರು.
ರಾಮನಗರದ ಟಿ.ಆರ್. ಮಿಲ್ ಮೈದಾನದಲ್ಲಿ ನಗಾರಿ ಬಾರಿಸುವ ಮೂಲಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ, ಈಶ್ವರ ಖಂಡ್ರೆ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇದೊಂದು ಐತಿಹಾಸಿಕ ನಡಿಗೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೆ ಸತ್ತರೂ ಅವಮಾನ.

ಹಾಗಾಗಿ ಈ ಹೋರಾಟವನ್ನ ಹಮ್ಮಿಕೊಂಡಿದ್ದೇವೆ. ನಮ್ಮ ಹೋರಾಟವನ್ನು ಬಿಜೆಪಿ, ಜೆಡಿಎಸ್ ನವರು ಟೀಕೆ ಮಾಡ್ತಿದ್ದಾರೆ.

ಅವರು ಯಾವ ಟೀಕೆ ಬೇಕಾದರೂ ಮಾಡಲಿ. ನಮ್ಮ ಮೇಕೆದಾಟು ಹೋರಾಟ ಮುಂದುವರಿಯಲಿದೆ. ಇದು ನಮ್ಮ ಹೋರಾಟವಲ್ಲ, ಜನರ ಹೋರಾಟ. ದೆಹಲಿ ಪಾರ್ಲಿಮೆಂಟ್ ಮುಂದೆ ಧರಣಿ ಕೂರುತ್ತೇವೆ. ನಾವೇ ಮುಂದೆ ಗುದ್ದಲಿ ಪೂಜೆ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಮನಗರದಿಂದ ಶುರುವಾಗಿರುವ ಪಾದಯಾತ್ರೆ, ಸಂಜೆ ಬಿಡದಿ ತಲುಪಲಿದೆ. ನಾಳೆ ಬಿಡದಿಯಿಂದ ಬೆಂಗಳೂರಿಗೆ ಹೊರಡಲಿರುವ ಪಾದಯಾತ್ರೆ ಸೋಮವಾರ ಸಂಜೆ ಕೆಂಗೇರಿ ತಲುಪಲಿದೆ.
ಕಾಂಗ್ರೆಸ್ ಪಾದಯಾತ್ರೆಗೆ ಬಿಗಿ ಬಂದೋಬಸ್ತ್
ಕಾಂಗ್ರೆಸ್ ನ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಒಬ್ಬ ಎಸ್‌ಪಿ, ಇಬ್ಬರು ಎಎಸ್‌ಪಿಗಳು, ೪ ಡಿವೈಎಸ್ ಪಿ ಗಳು, ೧೨ ಇನ್ಸ್ಪೆಕ್ಟರ್‌ಗಳು, ೩೮ ಪಿಎಸ್‌ಐ, ೩೭ ಎಎಸ್‌ಐ, ೬೦೦ ಪೊಲೀಸ್ ಸಿಬ್ಬಂದಿ, ೫೦ ಮಹಿಳಾ ಪಿಸಿಗಳು, ೧೦೦ ಹೋಮ್‌ಗಾರ್ಡ್, ೨೦ ಕೆಎಸ್‌ಆರ್‌ಪಿ ತುಕಡಿ, ೧೨ ಡಿಎಆರ್ ಸೇರಿದಂತೆ ೧,೨೦೦ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

More News