ಪ್ಯಾರಿಸ್: ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ. ಅಂತಾರಾಷ್ಟ್ರೀಯ ಫುಟ್‌ಬಾಲ್‌ನ ಜಾಗತಿಕ ಮಂಡಳಿಯಾಗಿರುವ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರ ಹಾಕಿದೆ.
ಈ ವರ್ಷ ಕತಾರ್‌ನಲ್ಲಿ ಆಯೋಜನೆಗೊಳ್ಳಲಿರುವ ಫುಟ್‌ಬಾಲ್ ವಿಶ್ವಕಪ್ ಟೂರ್ನಿಗೆ ನಡೆಯುವ ಅರ್ಹತಾ ಪಂದ್ಯಗಳಿಂದಲೂ ರಷ್ಯಾದ ತಂಡಗಳನ್ನು ಬಹಿಷ್ಕರಿಸಲಾಗಿದೆ.
ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಷ್ಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿವಿಧ ದೇಶಗಳ ಫುಟ್‌ಬಾಲ್ ಸಂಸ್ಥೆಗಳು ಫಿಫಾ ಅನ್ನು ಒತ್ತಾಯಿಸಿದ್ದವು. ಹೀಗಾಗಿ, ಯುರೋಪ್ ಫುಟ್‌ಬಾಲ್ ಒಕ್ಕೂಟ ಆಡಳಿತ ಮಂಡಳಿಯ ಸಮನ್ವಯತೆಯೊಂದಿಗೆ ಫಿಫಾ ರಷ್ಯಾವನ್ನ ಒಕ್ಕೂಟದಿಂದ ಹೊರ ಹಾಕಿ ನಿರ್ಧಾರ ಕೈಗೊಂಡಿದೆ.
ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಲು ಅನುಮತಿ ನೀಡಲು ನಿರಾಕರಿಸಿರುವ ಫಿಫಾ ರಷ್ಯಾದ ಕ್ಲಬ್‌ಗಳಿಗೂ ನಿರ್ಬಂಧ ಹೇರಿದೆ. ಮುಂದಿನ ಆದೇಶದವರೆಗೆ ರಷ್ಯಾ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಫಿಫಾ ಮತ್ತು ಅದರ ಯುರೋಪಿಯನ್ ಫುಟ್‌ಬಾಲ್ ಒಕ್ಕೂಟ ತಿಳಿಸಿದೆ.

`ಫುಟ್‌ಬಾಲ್ ಇದೀಗ ಸಂಪೂರ್ಣವಾಗಿ ಒಗ್ಗೂಡಿದೆ. ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ನಾವು ಒಗ್ಗಟ್ಟು ಪ್ರದರ್ಶಿಸಲಿದ್ದೇವೆ’ ಎಂದು ಫಿಫಾ ಪ್ರಕಟಿಸಿದೆ.




