GST MONEY PENDING: ಜಿ ಎಸ್ ಟಿ ಪರಿಹಾರದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ! ಕೇಂದ್ರದಿಂದ ಕೋಟ್ಯಂತರ ರೂಪಾಯಿ ಬಾಕಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಸಿದ್ಧತೆಗಳು ಬಹುತೇಕ ಅಂತ್ಯಗೊಂಡಿವೆ. ನಾಳೆ ರಾಜ್ಯ ಸರ್ಕಾರದ ಆರ್ಥಿಕ ವರ್ಷ 2022-23 ರ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡನೆ ಮಾಡಲಿದ್ದಾರೆ, ಆದರೆ ಆರ್ಥಿಕ ಇಲಾಖೆ ಹೇಳುವ ಪ್ರಕಾರ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿ ಎಸ್ ಟಿ ಪರಿಹಾರ ಮತ್ತು ಕೇಂದ್ರ ಅನುದಾನ ಸಾವಿರಾರು ಕೋಟಿ ಬಾಕಿ ಇದ್ದು, ಇದರ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರವಿದೆ.
ಇದನ್ನು ಕೇಂದ್ರ ಸರ್ಕಾರ ನೀಡಿದರೆ ರಾಜ್ಯದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬಹುದು, ಇಲ್ಲದಿದ್ದರೆ, ಯಾವುದೇ ಯೋಜನೆಗಳನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ದಬ್ಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದಿದ್ದಾರೆ.
₹ 7000 ಕೋಟಿ ಜಿಎಸ್ ಟಿ ಪರಿಹಾರ ಪಾವತಿ ಬಾಕಿ
ಜಿ ಎಸ್ ಟಿ ಜಾರಿ ಆದ ಸಂದರ್ಭದಿಂದಲೂ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಇಲಾಖೆ ತಟ್ಟುತ್ತಲೇ ಇದೆ ಹೊರತು ಈವರೆಗೆ ಸಮಾಧಾನಕರವಾದ ಪರಿಹಾರ ರಾಜ್ಯಕ್ಕೆ ಸಿಕ್ಕಿಲ್ಲ. ಈ ನಡುವೆ ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ  ಜಿಎಸ್ ಟಿ ಪರಿಹಾರವಾಗಿ ಸಾಲ ಪಡೆಯುವ ವಿಶೇಷ ಅವಕಾಶವನ್ನು ಬಳಸಿಕೊಂಡಿದೆ.
ವಾಣಿಜ್ಯ ಇಲಾಖೆ ಮಾಹಿತಿ ಪ್ರಕಾರ 2021-22ರಲ್ಲಿ ಜಿಎಸ್ ಟಿ ಪರಿಹಾರ ಹಾಗೂ ಸಾಲದ ರೂಪದಲ್ಲಿ ₹18,000 ಕೋಟಿ ಸ್ವೀಕರಿಸಿದೆ. ಇನ್ನೂ₹ 7,000 ಕೋಟಿ ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ. ಒಟ್ಟು ₹11,000 ಕೋಟಿ ಜಿಎಸ್ ಟಿ ನಷ್ಟ ಪರಿಹಾರ ಹಾಗೂ ವಿಶೇಷ ಸಾಲದ ರೂಪದ ಹಣ ಬಾಕಿ ಉಳಿದುಕೊಂಡಿದೆ.
ಕೇಂದ್ರದಿಂದ ನಾನಾ ಅನುದಾನಗಳ ₹7500 ಕೋಟಿ ಬಾಕಿ
ರಾಜ್ಯ ಸರ್ಕಾರಗಳು ತನ್ನ ಹಣಕಾಸು ನಿರ್ವಹಣೆಗೆ ನೆಚ್ಚಿಕೊಂಡಿರುವುದು ಕೇಂದ್ರದ ಅನುದಾನಗಳನ್ನು. ಕೇಂದ್ರದ ಅನುದಾನವೂ ಬಿಡುಗಡೆಯಾಗದೇ ₹7,851 ಬಾಕಿ ಉಳಿದಿದೆ.
ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲಿನ ರೂಪದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 2021-22ರಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲಾಗಿ ₹24,273 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಈವರೆಗೆ ರಾಜ್ಯ ಸರ್ಕಾರ ಸ್ವೀಕಾರ ಮಾಡಿರುವುದು ₹16,422 ಕೋಟಿ ಮಾತ್ರ. ಅಂದರೆ ಇನ್ನೂ ₹7,851 ಕೋಟಿ ಬಾಕಿ ಉಳಿದುಕೊಂಡಿದೆ.

2020-21ರಲ್ಲಿ ₹28,591 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ₹21,694 ಕೋಟಿ . ಅಂದಾಜಿಗಿಂತ ₹6,897 ಕೋಟಿ ಪಾವತಿಯಾಗದೆ ಬಾಕಿ ಉಳಿದುಕೊಂಡಿದೆ‌. ಇತ್ತ ಕೇಂದ್ರದಿಂದ ವಿವಿಧ ಯೋಜನೆಗಳಿಗೆ 2021-22 ಸಾಲಿನಲ್ಲಿ ₹28,245 ಕೋಟಿ ಅನುದಾನ ಬಿಡುಗಡೆಯ ಅಂದಾಜು ಮಾಡಲಾಗಿತ್ತು. ಆದರೆ ಈವರೆಗೆ ಅನುದಾನ ಬಿಡುಗಡೆ ಮಾಡಿರುವುದು ₹19,737 ಕೋಟಿ.
ಒಟ್ಟಾರೆ ಕೇಂದ್ರ ಸರ್ಕಾರದ ನೆರವಿಗೆ ಎಷ್ಟೇ ಅಂಗಲಾಚಿದರೂ ರಾಜ್ಯ ಸರ್ಕಾರದ ಮನವಿಗೆ ಕಿವಿಗೊಡುತ್ತಿಲ್ಲ. ಈ ಹಿನ್ನಲೆಯಲ್ಲಿ ಕಳೆದ ಎರಡು ಬಜೆಟ್ ನಲ್ಲೂ ಅರ್ಥಿಕ ಇಲಾಖೆ ಎಷ್ಟೇ ಹರಸಾಹಸ ಪಟ್ಟರೂ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಾರಿಯೂ ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಮಂಡನೆ ಮಾಡಬೇಕಿದೆ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿ ಯೋಜನೆಯ ಅನುದಾನ ನೀಡುವಾಗ ಕೈಕೈ ಹಿಸುಕಿಕೊಳ್ಳುವಂತಾಗಿದೆ.

More News