EDIBLE OIL PRICE: ಅಡುಗೆ ಮನೆಗೆ ಬಿಸಿ ಮುಟ್ಟಿಸಿದ ಉಕ್ರೇನ್ ಸಂಘರ್ಷ: ಗಗನಕ್ಕೇರಿದ ಖಾದ್ಯತೈಲಗಳ ಬೆಲೆ

ಬೆಂಗಳೂರು : ರಷ್ಯಾ ಉಕ್ರೇನ್ ಸಂಘರ್ಷದ ನಡುವೆ ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಸೂರ್ಯಕಾಂತಿ ಎಣ್ಣೆ, ಕಡಲೆಕಾಯಿ ಎಣ್ಣೆ ಮತ್ತು ತಾಳೆ ಎಣ್ಣೆಗಳ ಬೆಲೆ ಗಗನಕ್ಕೇರಿದೆ.
ಕಳೆದ ಎರಡು ವರ್ಷಗಳಿಂದ ಎಣ್ಣೆಬೀಜಗಳ ದೇಶಿಯ ಉತ್ಪನ್ನ ಕಡಿಮೆಯಾಗಿತ್ತು. ಇದಕ್ಕೆ ಪ್ರಮುಖ ಕಾರಣ ಕೋವಿಡ್, ಇದರಿಂದ ಬೆಲೆ ಏರಿಕೆ ಕಂಡಿದ್ದ ಖಾದ್ಯ ತೈಲದ ಬೆಲೆ ಕಳೆದ ಕೆಲವು ತಿಂಗಳಿಂದ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಈಗ ಯುದ್ದದಿಂದ ಮತ್ತೆ ದಿನದಿಂದ ದಿನಕ್ಕೆ ಚಿನ್ನ-ಬೆಳ್ಳಿ ಬೆಲೆಯಂತೆ ಖಾದ್ಯತೈಲ ಬೆಲೆಯೂ ಏರಿಕೆ ಕಾಣುತ್ತಿದೆ.
ಬೆಲೆ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಈಗ ಮತ್ತೆ ಬೆಲೆ ಏರಿಕೆ ತಲೆನೋವಾಗಿ ಪರಿಣಮಿಸಿದೆ. ಖಾದ್ಯತೈಲದ ಬೆಲೆ ನಿಯಂತ್ರಣಕ್ಕೆ ಅಡುಗೆ ಎಣ್ಣೆ ಮತ್ತು ಎಣ್ಣೆ ಬೀದಗಳ ಮೇಲಿನ ಆಮದು ಮಾಡಿಕೊಳ್ಳಲು ಇದ್ದ ತೆರಿಗೆಯ ಮೇಲೆ ಕೇಂದ್ರ ಸರ್ಕಾರ ರಿಯಾಯಿತಿ ಘೋಷಿಸಿತ್ತು.
ರಷ್ಯಾ ಉಕ್ರೇನ್ ಸಂಘರ್ಷ ಆರಂಭವಾದ ಬಳಿಕ ಕಳೆದ ಏಳು ದಿನಗಳಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಶೇಕಡಾ 6 ರಷ್ಟು ಹೆಚ್ಚಳ ಕಂಡಿದೆ. ಶೇಕಡಾ 80 ರಷ್ಟು ಸೂರ್ಯಕಾಂತಿ ಎಣ್ಣೆ ಉಕ್ರೇನ್ ನಿಂದ ಆಮದಾಗುತಿತ್ತು. ಪ್ರಸ್ತುತ ಉಕ್ರೇನ್ ನಿಂದ ಬರುತ್ತಿದ್ದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದೆ.

ಸಾಮಾನ್ಯ ಅಡುಗೆ ಎಣ್ಣೆ – 140ರೂ. ರಿಂದ 180 ರೂ, ಗೋಲ್ಡ್ ವಿನ್ನರ್ – 140ರೂ ನಿಂದ 170 ರೂ, ದೀಪದ ಎಣ್ಣೆ – 140ರೂ -180ರೂ, ಸನ್ ಫ್ಯೂರ್ ಆಯಿಲ್ – 150 ರೂ ರಿಂದ 180 ರೂ. ಫ್ರೀಡಂ ಆಯಿಲ್ – 145ರೂ ನಿಂದ 185 ರೂ, ಓಂ ಆಯಿಲ್ 150 ರೂ. ನಿಂದ 180ರೂ, ಜೆಮಿನಿ ಆಯಿಲ್ 150 ರೂ ನಿಂದ 185ರೂ, ರುಚಿಗೋಲ್ಡ್​​ ಆಯಿಲ್ 140 ರೂ ನಿಂದ 165 ರೂ, ಫಾರ್ಚುನ್​ ಆಯಿಲ್ 135 ರೂ. ನಿಂದ 175 ರೂ. ಹೆಚ್ಚಾಗಿದೆ. ಇದು ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಗಳು ನಿಚ್ಚಳವಾಗಿದೆ.

ಕಳೆದ ಒಂದು ವಾರದಿಂದ ಶೇ 5 ರಷ್ಟು ಚಿನ್ನ, ಶೇ 10 ಬೆಳ್ಳಿ, ಶೇ 2ರಷ್ಟು ಹೆಚ್ಚಳಕಂಡಿದೆ. ಫೆಬ್ರುವರಿ 24ರಂದು 22 ಕ್ಯಾರೆಟ್ ಚಿನ್ನದ ಧಾರಣೆ ಗ್ರಾಂಗೆ 4,450 ರೂ ಇತ್ತು. ಆದರೆ ಮಾರ್ಚ್​ 3ರಂದು ಇದು 4,950 ರೂಗೆ ಮುಟ್ಟಿತು. ದೇಶದಲ್ಲಿ ಪೆಟ್ರೋಲ್ ಬೆಲೆ ಸದ್ಯ ಒಂದು ಲೀಟರ್​ಗೆ 100.58 ರೂ, ಡೀಸೆಲ್ ಬೆಲೆ 85.01ರೂ ಇದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ 115ರಿಂದ 122ಕ್ಕೆ ಹಾಗೂ ಡೀಸೆಲ್​ 100ರಿಂದ 105ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

More News