ದೆಹಲಿಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮವೊಂದಕ್ಕೆ 37 ಲಕ್ಷ ರೂಪಾಯಿ ಮುಂಗಡ ಹಣ ಪಡೆದು ಕಾರ್ಯಕ್ರಮಕ್ಕೆ ಬಾರದೇ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಟಾರ್ ಕಿಡ್ ಸೋನಾಕ್ಷಿ ಸಿನ್ಹಾ ಕೊನೆಗೂ ಮೌನ ಮುರಿದಿದ್ದಾರೆ.
ಈ ಸುದ್ದಿ ನಕಲಿ, ಕೇವಲ ತಮ್ಮ ಜನಪ್ರಿಯತೆಗಾಗಿ ವ್ಯಕ್ತಿಯೊಬ್ಬ ಈ ಕೆಲಸ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಆಯೋಜಕರಾಗಿದ್ದ ಪ್ರಮೋದ್ ಶರ್ಮಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು ಎಂಬ ಸುದ್ದಿ ವರದಿಯಾಗಿತ್ತು. ಇದಕ್ಕೆ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು ಹೀಗೆ.

ನನ್ನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಚಾರ ಸುಳ್ಳು, ನನಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿರುವ ದುಷ್ಟ ವ್ಯಕ್ತಿಯ ಕೆಲಸ ಇದು. ಪತ್ರಕರ್ತರು ಈ ಸುದ್ದಿಯನ್ನು ನಂಬಬೇಡಿ ಹಾಗೂ ಪ್ರಕಟಿಸಬೇಡಿ. ಪ್ರಚಾರಕ್ಕಾಗಿ ಆ ವ್ಯಕ್ತಿ ಮಾಡಿರುವ ಕುತಂತ್ರ ಎಂದು ಸೋನಾಕ್ಷಿ ಹೇಳಿದ್ದಾರೆ.

ಆ ವ್ಯಕ್ತಿ ಇಂತಹ ದುರುದ್ದೇಶಪೂರಿತ ಲೇಖನಗಳನ್ನು ಹಾಕಿಸುವ ಮೂಲಕ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ದಯವಿಟ್ಟು ಕಿರುಕುಳ ನೀಡುವ ಈ ದಂಧೆಯಲ್ಲಿ ಪಾಲ್ಗೊಳ್ಳಬೇಡಿ. ನನ್ನ ವಿರುದ್ಧ ಯಾವುದೇ ವಾರೆಂಟ್ ಜಾರಿಯಾಗಿಲ್ಲ ಎಂದು ಸೋನಾಕ್ಷಿ ಸ್ಪಷ್ಟನೆ ನೀಡಿದ್ದಾರೆ.




