ಬೆಂಗಳೂರು: ತಂತ್ರಜ್ಞಾನದ ಸಮರ್ಪಕ ಬಳಕೆ ಮೂಲಕ ಆತ್ಮನಿರ್ಭರತೆಗೆ ಒತ್ತು ನೀಡಲಾಗುವುದು. ಈ ಬಜೆಟ್ ನಲ್ಲಿ ಅಂಥ ಪ್ರಯತ್ನ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ “ಆತ್ಮನಿರ್ಭರ ಅರ್ಥ ವ್ಯವಸ್ಥೆಯ ಭಾರತ” ವಿಷಯದ ಕುರಿತು ಅವರು ಮಾತನಾಡಿ, ಇತ್ತೀಚೆಗೆ ತಾವು ಮಂಡಿಸಿದ ಬಜೆಟ್ ಬಗ್ಗೆ ಸಮರ್ಥನೆ ನೀಡಿದರು. ಸ್ಥಳೀಯವಾಗಿ ಉತ್ಪಾದಿಸಿ ವಿಶ್ವಕ್ಕೆ ಸರಬರಾಜು ಮಾಡುವ ಚಿಂತನೆಯೊಂದಿಗೆ ಆತ್ಮನಿರ್ಭರತೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕೋವಿಡ್ ಲಸಿಕೆ ವಿವರವನ್ನು ಆ್ಯಪ್ ಮೂಲಕ ಪಡೆಯುವ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದರು.
75 ಡಿಜಿಟಲ್ ಬ್ಯಾಂಕ್ ಸ್ಥಾಪನೆ, ಡಿಜಿಟಲ್ ಕರೆನ್ಸಿ, ದೂರ ಶಿಕ್ಷಣ ವಿಶ್ವವಿದ್ಯಾಲಯ ಮಾತ್ರವಲ್ಲದೆ ಡಿಜಿಟಲ್ ಯುನಿವರ್ಸಿಟಿ, ಇ ಪಾಸ್‍ಪೋರ್ಟ್ ಮೊದಲಾದವುಗಳ ಮೂಲಕ ಭಾರತವನ್ನು ಬ್ರ್ಯಾಂಡೆಡ್ ಆಗಿ ಬದಲಾಯಿಸಲಾಗುತ್ತಿದೆ ಎಂದು ವಿವರಿಸಿದರು. ಸಾವಿರ ಪುರುಷರಿಗೆ 900ರ ಆಸುಪಾಸಿನಲ್ಲಿದ್ದ ಮಹಿಳೆಯರ ಸಂಖ್ಯೆ ಇದೀಗ 1026ಕ್ಕೆ ಹೆಚ್ಚಾಗಿದೆ. ಈ ಅನುಪಾತವೇ ನಮ್ಮ ಸಾಧನೆಯ ಪ್ರತಿಬಿಂಬ ಎಂದರು. ಉನ್ನತ ಶಿಕ್ಷಣದಲ್ಲೂ ಮಹಿಳಾ ಸಂಖ್ಯೆ ತೀವ್ರ ಹೆಚ್ಚಳ ಕಂಡಿದೆ. ಎನ್‍ಸಿಸಿ, ಸೇನೆ ಸೇರಿ ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಸಿಗುತ್ತಿದೆ ಎಂದು ತಿಳಿಸಿದರು. ಹೆರಿಗೆ ಸಂಬಂಧ ರಜೆಯನ್ನು 12 ವಾರದಿಂದ 26 ವಾರಕ್ಕೆ ಏರಿಸಲಾಗಿದೆ ಎಂದರು.
ಭಾರತದಲ್ಲಿ ಸಿಗುವ ವಸ್ತುವಿಗೆ ಕಡಿಮೆ ಸುಂಕ ಮತ್ತು ಅದೇ ವಸ್ತು ಆಮದಾಗುತ್ತಿದ್ದರೆ ಹೆಚ್ಚು ತೆರಿಗೆ ಎಂಬ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಆದರೆ, ಇಲ್ಲಿ ಅವಶ್ಯವಾಗಿ ಬೇಕಾದ ಹಾಗೂ ಆಂತರಿಕವಾಗಿ ಉತ್ಪಾದಿಸಲಾಗದ ವಸ್ತುಗಳಿಗೆ ಹೆಚ್ಚು ತೆರಿಗೆ ವಿಧಿಸುತ್ತಿಲ್ಲ. ಸಮರ್ಪಕ ಚಿಂತನೆ ಮತ್ತು ದೂರದೃಷ್ಟಿಯೊಂದಿಗೆ ಆತ್ಮನಿರ್ಭರತೆಯ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಪೋಲಿಯೋ ಲಸಿಕೆಗೆ ಆರು ತಿಂಗಳು ಕಾಯುವ ಸ್ಥಿತಿ ಹಿಂದೆ ಇತ್ತು. ಈಗ ಕೋವಿಡ್‍ಗೆ ಹಲವು ಲಸಿಕೆಗಳನ್ನು ನಾವು ಉತ್ಪಾದಿಸುತ್ತಿದ್ದೇವೆ. ವಿದೇಶಗಳ ಮಾನ್ಯತೆಯೂ ಲಭಿಸಿದೆ ಎಂದು ಹೆಮ್ಮೆಯಿಂದ ನುಡಿದರು. ನಮ್ಮ ಶಕ್ತಿಯ ಅನಾವರಣದಿಂದ ಆತ್ಮನಿರ್ಭರತೆಯ ಸಾಧನೆ ಮಾಡಬೇಕಿದೆ ಎಂದು ತಿಳಿಸಿದರು.
ಜನ್‍ಧನ್ ಖಾತೆಯ ಮೂಲಕ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಪರಿಹಾರ ವಿತರಣೆ ಕಷ್ಟವಾಗಲಿಲ್ಲ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳೂ ಈ ವಿಚಾರದಲ್ಲಿ ಸವಾಲನ್ನು ಎದುರಿಸಿದ್ದವು ಎಂದು ತಿಳಿಸಿದರು. ಹಸಿವಿನಿಂದ ಯಾರೂ ಇರಬಾರÀದೆಂಬ ಉದ್ದೇಶದಿಂದ ಉಚಿತವಾಗಿ ಪಡಿತರವನ್ನೂ ನೀಡಲಾಯಿತು ಎಂದು ವಿವರಿಸಿದರು. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಲ್ಲ ರಾಜ್ಯಗಳಿಗೂ ತಲುಪಿದೆ. ಬಿಜೆಪಿ ಆಡಳಿತ, ಬಿಜೆಪಿಯೇತರ ಆಡಳಿತದ ರಾಜ್ಯ ಎಂಬ ಭೇದಭಾವ ಇರಲಿಲ್ಲ ಎಂದರು.

ಪ್ರತಿ ಮನೆಗೂ ನಳ್ಳಿ ನೀರಿನ ಯೋಜನೆ ಬರಿಯ ಘೋಷಣೆಯಲ್ಲ. 5 ಕೋಟಿ ಮನೆಗಳು ಇದರ ಲಾಭ ಪಡೆದಿವೆ. ಉಳಿದ ಸುಮಾರು 3.8 ಕೋಟಿ ಸಂಪರ್ಕಕ್ಕೆ 60 ಸಾವಿರ ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು. 2014-19 ನಡುವಿನ ಅವಧಿಯಲ್ಲಿ ನವ ಭಾರತದ ನಿರ್ಮಾಣಕ್ಕಾಗಿ ಘೋಷಿಸಿದ ಕಾರ್ಯಕ್ರಮಗಳು ಅರ್ಹತೆಯ ಅಧಾರದಲ್ಲಿ ಸಕಾಲದಲ್ಲಿ ಅನುಷ್ಠಾನಕ್ಕೆ ಬಂದಿವೆ ಎಂದರು. ಕೆಲವರಿಗಷ್ಟೇ ಯೋಜನೆ ಜಾರಿ, ಇನ್ನೂ ಹಲವರಿಗೆ ಪ್ರಯೋಜನ ಸಿಗದಿರುವ ರಾಜಕೀಯ ನಮ್ಮದಲ್ಲ. ಎಲ್ಲರಿಗೂ ಪ್ರಯೋಜನ ಕೊಡುವ ಚಿಂತನೆ ಮತ್ತು ಅನುಷ್ಠಾನ ನಮ್ಮದಾಗಿತ್ತು ಎಂದು ತಿಳಿಸಿದರು.
ಎಲ್ಲ ಮನೆಗೆ ವಿದ್ಯುತ್, ಅರ್ಹರೆಲ್ಲರಿಗೂ ಗ್ಯಾಸ್ ಸಂಪರ್ಕ, ಕಡಿಮೆ ವಿದ್ಯುತ್ ಬಳಸುವ ಬಲ್ಬ್ ವಿತರಣೆ ಸಾಧ್ಯವಾಗಿದೆ. ಅಭಿವೃದ್ಧಿ ವಿಚಾರ ಬಂದಾಗ ಎಲ್ಲರೂ ಸಮಾನರು ಎಂಬ ಮಾನದಂಡವನ್ನು ಅನುಸರಿಸಲಾಗಿದೆ. 2014-19 ನಡುವೆ ಈ ರೀತಿಯ ಪ್ರಯತ್ನ ಸಾಗಿದ್ದರಿಂದ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಅಭಿವೃದ್ಧಿ ಕಾರ್ಯ ಮುಂದುವರಿಸಲು ಸಾಧ್ಯವಾಯಿತು ಎಂದರು.