KARNATAKA BANDH: ಹಿಜಾಬ್ ಧರಿಸಲು ಅನುಮತಿಗಾಗಿ ಒತ್ತಾಯಿಸಿ ನಾಳೆ ಕರ್ನಾಟಕ ಬಂದ್..!

ಬೆಂಗಳೂರು : ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ, ಹಿಜಾಬ್ ಧರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಲಿಂ ಮುಖಂಡರು, ಸ್ವಯಂ ಪ್ರೇರಿತರಾಗಿ ನಾಳೆ ಕರ್ನಾಟಕ ಬಂದ್ ಗೆ ಕರೆನೀಡಿದ್ದಾರೆ.
ನಾಳೆ ಮಾರ್ಚ್ 17 ರಂದು ಇಡೀ ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಶಾಂತಿಯುತ ಬಂದ್ ನಡೆಸಲಿದ್ದಾರೆ. ನಿನ್ನೆ ಸಂಜೆ ಬೆಂಗಳೂರಿನಲ್ಲಿ ಧರ್ಮಗುರುಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಯಾರ ಮೇಲೂ ಒತ್ತಾಯ ಹೇರಿ ಬಂದ್ ಮಾಡಬಾರದು ಎಂದು ಮುಖಂಡ ಸಗೀರ್ ಅಹ್ಮದ್ ತಿಳಿಸಿದ್ದಾರೆ.
ಅಮೀರ್ ಎ ಷರಿಯಾತ್ ಎನ್ನುವವರ ನಿವಾಸದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಸಭೆಯಲ್ಲಿ ಸಲೀಂ ಅಹ್ಮದ್, ಜಮೀರ್ ಅಹ್ಮದ್ ಖಾನ್, ಯು ಟಿ ಖಾದರ್, ರೆಹಮಾನ್ ಖಾನ್, ಎನ್ ಎ ಹ್ಯಾರಿಸ್, ನಜೀರ್ ಅಹ್ಮದ್ ಸೇರಿದಂತೆ ಹಲವಾರು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಹೈಕೋರ್ಟ್ ತೀರ್ಪಿನ ಬಳಿಕ ವಿದ್ಯಾರ್ಥಿನಿಯರು ನೀಡಿದ್ದ ಹೇಳಿಕೆಗೆ ಧರ್ಮಗುರುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹೈಕೋರ್ಟ್ ತೀರ್ಪಿನಿಂದ ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ, ಸುಪ್ರೀಂಕೋರ್ಟ್ ಗೆ ಹೋಗುವ ಅವಕಾಶವಿದ್ದು ಅಲ್ಲಿ ನ್ಯಾಯ ಸಿಗಲಿದೆ, ಅನಾವಶ್ಯಕವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಷರಿಯಾತ್ ಸೂಚಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

More News