ಬೀದರ್ : ತುಮಕೂರಿನ ಪಾವಗಡದಲ್ಲಿ ಖಾಸಗಿ ಬಸ್ ವೊಂದು ಪಲ್ಟಿ ಬಿದ್ದು ಎಂಟು ಜನರು ಮೃತಪಟ್ಟಿದ್ದಾರೆ. ಈ ಘಟನೆಯ ಬೆನ್ನಲ್ಲಿಯೇ ಗಡಿ ಜಿಲ್ಲೆ ಬೀದರ್ ನಲ್ಲೂ ಖಾಸಗಿ ಬಸ್ ವೊಂದು ಪಲ್ಟಿ ಬಿದ್ದಿದೆ.
ಆದರೆ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ, ಆದರೆ, ಸುಮಾರು ಆರರಿಂದ ಎಂಟು ಪ್ರಯಾಣಿಕರು ಗಂಭೀರ ಪ್ರಮಾಣದ ಗಾಯಗೊಂಡಿದ್ದಾರೆ. ಎಸ್ ಆರ್ ಎಸ್ ಟ್ರಾವಲ್ಸ್ ಗೆ ಸೇರಿದ ಖಾಸಗಿ ಬಸ್ ಪಲ್ಟಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದೆ.
ಬೆಂಗಳೂರಿನಿಂದ ಬೀದರ್ ಗೆ ತೆರಳುತ್ತಿದ್ದ ಎಸ್ ಆರ್ ಎಸ್ ಟ್ರಾವಲ್ಸ್ ಗೆ ಸೇರಿದ ಬಸ್, ಬೀದರ್ ತಾಲೂಕಿನ ಅಣದೂರು ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೀದರ್ ಕಡೆಗೆ ತೆರಳುತ್ತಿದ್ದ ಬಸ್ ಗೆ ಬೈಕ್ ವೊಂದು ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಪಿಯಾಗಿದೆ.

ಬಸ್ ನಲ್ಲಿದ್ದ ಸುಮಾರು ಎಂಟು ಜನರು ಗಾಯಗೊಂಡಿದ್ದು, ಅದರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ತಕ್ಷಣವೇ ಬ್ರೀಮ್ಸ್ ಅಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಬ್ರೀಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಅದೃಷ್ಟಶವಾತ್ ಯಾವುದೇ ರೀತಿಯಲ್ಲಿ ಪ್ರಾಣಾಪಾಯವಾಗಿಲ್ಲ ಎಂದು ದೂರು ದಾಖಲಿಸಿಕೊಂಡಿರುವ ಜನವಾಡ ಪೊಲೀಸರು ತಿಳಿಸಿದ್ದಾರೆ.




