ಭ್ರಷ್ಟಾಚಾರದಲ್ಲಿ ತೊಡಗಿರುವ ಸಮಾಜಕಲ್ಯಾಣ ಸಚಿವರನ್ನು ಕೈಬಿಡಿ, ಇಲ್ಲಾ ತಾವೇ ರಾಜೀನಾಮೆ ನೀಡಿ: ಪ್ರಿಯಾಂಕ್ ಖರ್ಗೆ ಆಗ್ರಹ

ಬೆಂಗಳೂರು : ಪ್ರಧಾನಮಂತ್ರಿ ನಾ ಖಾವೂಂಗಾ.. ನಾ ಖಾನೇದೂಂಗ ಎಂದು ಹೇಳಿದ್ದರು. ‌ಆದರೆ, ಈಗಿನ ಬಿಜೆಪಿ ಸರ್ಕಾರ ಮೈಭೀ ಖಾವೂಂಗಾ, ಸಬ್ ಕೋ ಖಿಲಾವೂಂಗಾ ಎನ್ನುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಕಿತಾಬ್ ಕೊಡಿ ಎಂದರೆ ಹಿಜಾಬ್ ವಿವಾದ ಮಾಡುತ್ತಾರೆ‌. ಒಟ್ಟಾಗಿ ಕಾಶ್ಮೀರ್ ಫೈಲ್ಸ್ ನೋಡಲು ಒಗ್ಗಟ್ಟಾಗಿ ಹೋಗುವ ಮಂತ್ರಿಗಳು ಸರ್ಕಾರ ಒಗ್ಗಟ್ಟಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪರಿಶಿಷ್ಟ ಜಾತಿ ಪಂಗಡದ ಜನರ ದುಡ್ಡನ್ನು ಸ್ವಾರ್ಥಕ್ಕೆ ಬಳಸಿಕೊಂಡು ಚುನಾವಣಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯವರು ಗಂಗಾಕಲ್ಯಾಣ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಮಾಜಕಲ್ಯಾಣ ಸಚಿವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ದಾಖಲೆ ಪರಿಶೀಲನೆ ವೇಳೆ ಕಾರ್ಯಾನುಭವ ಇಲ್ಲ ಎಂದು ನಿರಾಕರಿಸಿದರು ಎರಡೇ ತಿಂಗಳಲ್ಲಿ ಟೆಂಡರ್ ಗೆ ಅರ್ಹರನ್ನಾಗಿ ಮಾನ್ಯ ಮಾಡಲಾಗುತ್ತದೆ, ಒಂದು ನಿಗಮದಲ್ಲಿ ಟೆಂಡರ್ ಗೆ ಅನರ್ಹರಾದವರು ಒಂದೇ ತಿಂಗಳಲ್ಲಿ ಮತ್ತೊಂದು ನಿಗಮದ ಟೆಂಡರ್ ಗೆ ಅರ್ಹರಾಗುತ್ತಾರೆ. ಇದು ಹೇಗೆ ಸಾಧ್ಯ? ಇಲ್ಲಿ ನಿಗಮ ಬೇರೆ ಆದರೂ ಇದನ್ನು ಪರಿಶೀಲಿಸುವ ಸಮಿತಿ ಹಾಗೂ ಅವರು ಅನುಸರಿಸುವ ಮಾನದಂಡ ಒಂದೇ ಆಗಿದೆ. ಆದರೂ ಒಂದರಲ್ಲಿ ಅನರ್ಹರಾದವರು ಮತ್ತೊಂದರಲ್ಲಿ ಅರ್ಹತೆ ಪಡೆಯುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
ಈ ಬಗ್ಗೆ ಸರ್ಕಾರ ಗಮನಹರಿಸುವುದಿಲ್ಲವೇ? ಈ ಅಧಿಕಾರಿಗಳಿಗೆ ಸರ್ಕಾರ ಸಂಬಳ ಕೊಡುತ್ತಿದೆಯೋ ಇಲ್ಲ, ಗುತ್ತಿಗೆದಾರರೋ? ಸರ್ಕಾರ ಕತ್ತೆ ಕಾಯುತ್ತಿದೆಯಾ? ಬಡವರ ಹಣ ಲೂಟಿ ಮಾಡುತ್ತಿದ್ದರೂ ಸುಮ್ಮನೆ ಕೂತಿರುವುದೇಕೆ ಎಂದು ಪ್ರಶ್ನಿಸಿದರು.

ಪಂಚಮುಖಿ ಎಂಬ ಕಂಪನಿ 28 ಕೋಟಿ ವಹಿವಾಟು ಮಾಡಿದ್ದು, ಅದು 22 ಕೋಟಿವರೆಗಿನ ಟೆಂಡರ್ ಸಿಗಬೇಕು. ಆದರೆ ಅವರಿಗೆ 73 ಕೋಟಿ ಮೊತ್ತದ ಟೆಂಡರ್ ನೀಡಲಾಗಿದೆ. 431 ಕೋಟಿಯಲ್ಲಿ 176 ಕೋಟಿ ಟೆಂಡರ್ ಕೇವಲ 3 ಗುತ್ತಿಗೆದಾರರಿಗೆ ಸಿಕ್ಕಿದೆ. ಪಂಚಮುಖಿಗೆ 73, ವೀರಭದ್ರಪ್ಪ ಎಂಬುವಬರಿಗೆ 48, ಶರವಣ ಎನ್ನುವವರಿಗೆ 55 ಕೋಟಿ ಟೆಂಡರ್ ಸಿಕ್ಕಿದೆ. ಇವರೆಲ್ಲರಿಗೂ ಅವರ ವಹಿವಾಟು ಮೀರಿ ಟೆಂಡರ್ ನೀಡಲಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಟೆಂಡರ್ ಹಗರಣದಲ್ಲಿ ಕೊಳವೆಬಾವಿ ಕೊರೆಯುವ ದರ ಡಬಲ್ ಮಾಡಿದ್ದಾರೆ. ಆದರೆ ಅದಕ್ಕೆ ಸೂಕ್ತ ಕಾರಣ, ಸಮರ್ಥನೆ ಕೊಟ್ಟಿಲ್ಲ. ಹಿಂದುಳಿದ ವರ್ಗದ ಇಲಾಖೆಯಲ್ಲೂ ಇದೆ ಯೋಜನೆ ಇದ್ದು, ಅಲ್ಲಿ ಕೊಳವೆಬಾವಿ ಕೊರೆಯಲು, ಪೈಪ್ ಅಳವಡಿಸಲು ಕಡಿಮೆ ಇದ್ದರೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಾತ್ರ ದರ ಡಬಲ್ ಮಾಡಿದ್ದಾರೆ.
14,577 ಕೊಳವೆ ಬಾವಿಯನ್ನು ಕಳೆದ ವರ್ಷದ ದರಕ್ಕೆ ಮಾಡಿದ್ದರೆ, 137 ಕೋಟಿ ವೆಚ್ಚ ಆಗುತ್ತಿತ್ತು. ಆದರೆ ಈಗ ಕರೆದಿರುವ ಟೆಂಡರ್ 267 ಕೋಟಿ ಆಗಿದೆ. 130 ಕೋಟಿ ವ್ಯತ್ಯಾಸ ಆಗಿದೆ. ಈ ದೀನದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಹೊಟ್ಟೆ ಮೇಲೆ ಹೊಡೆದು ಯಾರ ಲಾಭಕ್ಕೆ ಕೆಲಸ ಮಾಡುತ್ತಾರೆ. ಬಿಜೆಪಿಯವರು ಮಾತೆತ್ತಿದರೆ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್ ಅಂತಾರಲ್ಲ ಇದೇನಾ? ಎಂದು ಕಿಡಿಕಾರಿದರು.
ಈ ಬಗ್ಗೆ ಉತ್ತರ ಕೊಡಿ ಎಂದರೆ ಕಾಶ್ಮೀರ ಫೈಲ್ಸ್ ಸಿನಿಮಾ ತೋರಿಸುತ್ತೀರಾ? ಧರ್ಮದ ಪ್ರಚೋದನೆ ನೀಡುತ್ತೀರಾ? ಮಕ್ಕಳಲ್ಲಿ ಹಿಜಾಬ್, ಕೇಸರಿ ಶಾಲು ತರುತ್ತೀರ? ಇದಕ್ಕೆ ಉತ್ತರ ಕೊಡುವವರು ಯಾರು? ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಒಗ್ಗಟ್ಟಾಗಿ ಹೋಗುವ ನೀವು ಇದೇ ಒಗ್ಗಟ್ಟಿನಿಂದ ದೆಹಲಿಗೆ ಹೋಗಿ ಜಿಎಸ್ ಟಿ ಪರಿಹಾರ ತರುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಇದಕ್ಕೆ ಅನುಮೋದನೆ ಕೊಟ್ಟಿರುವ ಸಚಿವರ ವಿರುದ್ಧ ಸಂಪುಟದಿಂದ ವಜಾ ಮಾಡಬೇಕು. ದಲಿತರ ಹಣ ಹೊಡೆದು ಚುನಾವಣೆಗೆ ಹೋಗಿತ್ತೀರಾ? ಮುಖ್ಯಮಂತ್ರಿಗಳು ಸಚಿವರ ರಾಜೀನಾಮೆ ಪಡೆಯಲಾಗದಿದ್ದರೆ ಅವರೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಪಂಚ ರಾಜ್ಯ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರಲ್ಲ
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಪರಿಣಾಮ ಕರ್ನಾಟಕದ ಮೇಲೆ ಆಗುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವ ದೊಡ್ಡ ಸವಾಲು ನಮ್ಮ‌ ಮುಂದೆ ಇದೆ. ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವ ಸಂಪ್ರದಾಯವಿಲ್ಲ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ತಿಳಿಸಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಅನಿವಾರ್ಯವಾದ ಕಾರಣ ಪಂಜಾಬ್ ನಲ್ಲಿ ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ್ರು. ಕರ್ನಾಟಕದಲ್ಲಿ ಆ ಸಂದರ್ಭ ಇಲ್ಲ. ಆದರೂ ಪಕ್ಷದ ಹೈ ಕಮಾಂಡ್ ಆ ಸಂದರ್ಭದಲ್ಲಿ ಏನು ತೀರ್ಮಾನ ಕೈಗೊಳ್ಳುತ್ತದೋ ಅದರಂತೆ ನಡೆಯುತ್ತೇವೆ ಎಂದು ತಿಳಿಸಿದರು.

ಪಂಜಾಬ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಗೊಂದಲವಾದಂತೆ ಕರ್ನಾಟಕಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ಹೈಕಮಾಂಡ್ ಆದೇಶವನ್ನು ಇಲ್ಲಿ ಎಲ್ಲ ಒಪ್ಪಿಕೊಳ್ಳಬೇಕು. ತಾವು ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನದ ರೇಸ್ ನಲ್ಲಿ ಇರುವುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೆ ಎಂ ಬಿ ಪಾಟೀಲ್ ನುಣುಚಿಕೊಂಡರು.
ಮಾರ್ಚ್ 28 ರಂದು ಸಮಿತಿ ಅಧ್ಯಕ್ಷರಾಗಿ ಪ್ರಮಾಣವಚನ
ಮಾರ್ಚ್ 28 ರಂದು ಮಧ್ಯಾಹ್ನ 3ಗಂಟೆಗೆ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಎಂ. ಬಿ. ಪಾಟೀಲರು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಸಲೀಂ ಅಹಮದ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ‌ ಖರ್ಗೆ ಸೇರಿದಂತೆ ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದರು.

More News