ಬೆಳಗಾವಿ : ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧದ ಕೇಸ್ ಕ್ಲಿಯರ್ ಆಗಿದೆ, ಅವರು ಸಚಿವ ಸಂಪುಟ ಸೇರಲು ಯಾವುದೇ ಅಡೆತಡೆಗಳಿಲ್ಲ ಎಂದು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಎಪ್ರಿಲ್ ಮೊದಲ ವಾರ ಸಚಿವ ಸಂಪುಟ ವಿಸ್ತರಣೆ ಮಾಡಬಹುದು ಅಂತಿದ್ದಾರೆ, ಆಗ ಬೆಳಗಾವಿ ಜಿಲ್ಲೆಗೆ ಒಳ್ಳೆಯದೇ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಳೆದ ಬಾರಿ ಸಿಡಿ ಪ್ರಕರಣ ಆದ ಮೇಲೆ ಅದನ್ನೇ ನೆಪ ಇಟ್ಟುಕೊಂಡು ಅವರು ರಾಜೀನಾಮೆ ಸಲ್ಲಿಸಿದ್ದರು. ಆದ್ರೆ ಈಗ ಕೋರ್ಟ್ ನಲ್ಲಿ ಕೇಸ್ ಮುಗಿಯುತ್ತದೆ, ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ಗೆ ಹೋಗಿತ್ತು. ಆದ್ರೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ವಾಪಸ್ ಹೈಕೋರ್ಟ್ ನಲ್ಲಿ ನಿರ್ಣಯ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.
ತನಿಖಾಧಿಕಾರಿಗಳು ಸಲ್ಲಿಸಿದ ಬಿ ರಿಪೋರ್ಟ್ ನಲ್ಲೂ ಟ್ಯ್ರಾಪ್ ಅಂತಾ ಇದೆ, ಹೀಗಾಗಿ ರಮೇಶ ಜಾರಕಿಹೊಳಿ ಅವರದ್ದು ಕೋರ್ಟ್ ನಲ್ಲಿ ಯಾವುದೂ ಕೇಸ್ ಇಲ್ಲ, ಸಣ್ಣಪುಟ್ಟ ಎಫ್ಐಆರ್ ಪಾಸಿಂಗ್ ಕೇಸ್ ಗಳಿವೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪಕ್ಷದಲ್ಲಿ ಸಿಡಿ ಕೇಸ್ ಕ್ಲಿಯರ್ ಆದ ಮೇಲೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸದ್ಯ ರಮೇಶ ಜಾರಕಿಹೊಳಿ ಕೇಸ್ ಕ್ಲಿಯರ್ ಆಗಿದೆ, ಅವರು ಸಂಪುಟ ಸೇರಲು ಅಡೆತಡೆಗಳಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಸದ್ಯ ಐದು ರಾಜ್ಯಗಳ ಚುನಾವಣೆ ಇತ್ತು. ಅಲ್ಲಿ ಹೊಸ ಮುಖ್ಯಮಂತ್ರಿ ನೇಮಕ ಆಗಬೇಕಿದೆ, ಮಾರ್ಚ್ 25 ರವರೆಗೆ ಹೈಕಮಾಂಡ್ ಬ್ಯುಸಿ ಇದ್ದಾರೆ, ಏಪ್ರಿಲ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂದು ಹೇಳಿದ್ದಾರೆ.
ಬಿಜೆಪಿಗೆ ಬಂದಿರೋ 17 ಶಾಸಕರು ಬಿಜೆಪಿಯನ್ನ ಬಿಟ್ಟು ಎಲ್ಲೂ ಹೋಗುವುದಿಲ್ಲ, ಮತ್ತೊಮ್ಮೆ ಬಿಜೆಪಿ ಪಕ್ಷದಿಂದಲೆ 17 ಶಾಸಕರು ಗೆದ್ದು ಬರಲಿದ್ದಾರೆ ಎಂದು ಜಾರಕಿಹೊಳಿ ಸ್ಪಷ್ಟನೆ ನೀಡಿದರು.




