THE KASHMIR FILES v/s JAMES: ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್ ಚಿತ್ರಕ್ಕೆ ಸಮಸ್ಯೆಯಾಗಿಲ್ಲ: ನಟ ಶಿವರಾಜ್ ಕುಮಾರ್

ಬೆಂಗಳೂರು : ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಲನಚಿತ್ರವಾಗಲಿ ಅಥವಾ ನಮ್ಮ ಕುಟುಂಬದ ಯಾವುದೇ ಚಿತ್ರಕ್ಕೂ ಇದುವರೆಗೂ ಯಾರಿಂದಲೂ ಅಡ್ಡಿಯಾಗಿಲ್ಲ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ದಿ ಕಾಶ್ಮೀರ ಫೈಲ್ಸ್ ಚಿತ್ರದಿಂದ ಜೇಮ್ಸ್ ಚಿತ್ರಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ತಿಳಿಸಿದರು. ನಮ್ಮ ತಂದೆಯ ಕಾಲದಿಂದಲೂ ಯಾರೂ ಅಡ್ಡಿ ಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪುನೀತ್ ರಾಜ್ ಕುಮಾರ್ ನನಗೆ ತಮ್ಮನ ತರಹ, ಯಾವುದೇ ಸಮಸ್ಯೆ ಇದ್ರು ಬಗೆಹರಿಸುತ್ತೇನೆ, RRR ಚಿತ್ರದಿಂದ ಸಮಸ್ಯೆ ಆಗುವ ಸಾಧ್ಯತೆಗಳಿವೆ ಎಂದು ಸಿಎಂ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದ ಶಿವರಾಜ್ ಕುಮಾರ್, Nearly 25 ಲಕ್ಷ ಕಲೆಕ್ಷನ್ ಇರುವ ಥಿಯೇಟರ್ ನಲ್ಲಿ ಜೇಮ್ಸ್ ಚಿತ್ರ ತೆಗೆದು RRR ಹಾಕುತ್ತಿದ್ದಾರೆ, ಇದನ್ನ ಚೇಂಬರ್ ಜೊತೆ ಚರ್ಚೆ ಮಾಡಲು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ ಎಂದರು.

ಜೇಮ್ಸ್ ಚಿತ್ರ ಆರಂಭದಲ್ಲಿ 386 ಥಿಯೇಟರ್ ನಲ್ಲಿ ಇತ್ತು, ಈಗ ಅಂದ್ರೆ ನಾಳೆಯಿಂದ 275 ಥಿಯೇಟರ್ ನಲ್ಲಿ ಜೇಮ್ಸ್ ಸಿನಿಮಾ ಇರಲಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ‌ ಕನ್ನಡ ಚಿತ್ರಗಳಿಗೆ ಆದಾಯ ಬರುವ ಚಿತ್ರಮಂದಿರಗಳಲ್ಲಿ ಜೇಮ್ಸ್ ತೆಗೆದು RRR ಹಾಕ್ತಿದಾರೆ, ಇದೇ ನಮಗೆ ದೊಡ್ಡ ತೊಂದರೆ ಆಗಿದೆ, ಇದರ ಬಗ್ಗೆ ವಾಣಿಜ್ಯ ಮಂಡಳಿ‌ ಜತೆ ಚರ್ಚೆ ಮಾಡಲಾಗುವುದು ಎಂದರು.

ನಿರ್ಮಾಪಕ ಕಿಶೋರ್ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಜೇಮ್ಸ್ ಸಿನಿಮಾ ವೀಕ್ಷಣೆಗೆ ಆಹ್ವಾನ ನೀಡಿದ್ದೆ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಥಿಯೇಟರ್ ಸಿಗುತ್ತಿಲ್ಲ ಎಂದು ಸಿದ್ದರಾಮಯ್ಯನವರಿಗೆ ಹೇಳಿಲ್ಲ ಎಂದು ಅಳುಕಿನಿಂದಲೇ ಸ್ಪಷ್ಟನೆ ನೀಡಿದರು. ನಾನು ಅವರನ್ನು ಭೇಟಿ ಮಾಡಿ ಜೇಮ್ಸ್ ಚಿತ್ರ ನೋಡಲು ಆಹ್ವಾನಿಸಲು ಹೋಗಿದ್ದೆ ಎಂದು ಅವರು ತಿಳಿಸಿದರು.

ಜೇಮ್ಸ್ ಚಿತ್ರದ ಸಮಸ್ಯೆಯ ಮೂಲ ಹೇಳಿದ ಕಿಶೋರ್ ಪತ್ತಿಕೊಂಡ, ಎರಡು ಚಿತ್ರಮಂದಿರಗಳಲ್ಲಿ ಮಾತ್ರ ನೈಟ್ ಶೋ ತೆಗೀತಿವಿ ಅಂದ್ರು, ನೈಟ್ ಶೋ ತೆಗೆದು ಕಾಶ್ಮೀರ ಫೈಲ್ಸ್ ಹಾಕ್ತೀವಿ ಅಂತ ಕೇಳಿದ್ರು, ನಾನು ಆಗಲ್ಲ, ಜೇಮ್ಸ್ ನಡೀಲಿ ಅಂದೆ, ಅಷ್ಟೇ, ಆ ವಿಷಯ ಅಲ್ಲಿಗೇ ಕ್ಲೋಸ್ ಆಗಿತ್ತು ಎಂದು ಕಿಶೋರ್ ತಿಳಿಸಿದರು.

ಅಭಿಮಾನಿಗಳು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ, ನಿಮ್ಮ ನೆಚ್ಚಿನ ನಟನ ಸಿನಿಮಾಗೆ ಯಾವುದೇ ಸಮಸ್ಯೆ ಆಗಲ್ಲ, ಸಮಸ್ಯೆ ಆಗಲು ನಾವು ಬಿಡಲ್ಲ ಎಂದು ಅಪ್ಪು ಅಭಿಮಾನಿಗಳಿಗೆ ಶಿವಣ್ಣ ಮನವಿ ಮಾಡಿದರು.

More News