INCOME TAX NOTICE TO FORMER PM H D DEVEGOWDA WIFE: ಐಟಿಯಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪತ್ನಿಗೆ ನೊಟೀಸ್: ಮಾಜಿ ಸಚಿವ ಎಚ್ ಡಿ ರೇವಣ್ಣ ಕೆಂಡಾಮಂಡಲ

ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ನೊಟೀಸ್ ನೀಡಿರುವ ಕುರಿತು ಮಾಜಿ ಸಚಿವ ಎಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಮ್ಮ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ, ಅದನ್ನು ನೋಡಿ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಆರ್.ಟಿ.ಓ. ಕಚೇರಿಯಲ್ಲಿ ನೂರಾರು ಕೋಟಿ ಲೂಟಿ ಹೊಡೆಯುತ್ತಿದ್ದಾರೆ, ಅವರಿಗೇಕೆ ನೋಟೀಸ್ ನೀಡಲ್ಲ, ಒಂದು ಎಕರೆ ಏನು, ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ, ನಾನು ಸರ್ವೆ ಮಾಡಿ‌ ಬಿಲ್ ಕೊಟ್ಟರೆ ಸರಿಯಾಗಲ್ಲ, ಡಿಸಿಯರೇ ಸರ್ವೆ ಮಾಡಿಸಲಿ ಎಂದು ತಾಕೀತು ಮಾಡಿದರು.
ನಮ್ಮ ಅಪ್ಪ, ಅಮ್ಮ ಏನಾದ್ರು‌ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರಾ ಎಂದು ಪ್ರಶ್ನಿಸಿದ ರೇವಣ್ಣ, ನೋಟೀಸ್ ಕೊಟ್ಟಿದ್ದಾರೆ ಉತ್ತರ ಕೊಡ್ತೀವಿ ಎಂದು ಹೇಳಿದರು. ನಮಗೂ ಕಾಲ ಬರುತ್ತೆ, ಇದೇ ಏನು ಶಾಶ್ವತವಾಗಿ ಇರಲ್ಲ, ಏನಾದ್ರು ಕದ್ದು ವ್ಯವಸಾಯ ಮಾಡಿದ್ದೇವಾ, ದ್ರೋಣ್ ಸರ್ವೆ ಮಾಡಲಿ, ದೊಡ್ಡಪುರ, ಪಡುವಲಹಿಪ್ಪೆ ಹತ್ತಿರ ಜಮೀನು ಇದೆ ಎಂದು ತಿಳಿಸಿದರು.

ನಾನೇನಾದ್ರು ಸೈಟ್ ಬ್ಯುಸಿನೆಸ್ ಮಾಡಲು ಹೋಗಿದ್ದೇವಾ, ಹಾಸನ ನಗರದಲ್ಲಿ ನಗರಸಭೆಯಿಂದ ಸೈಟ್ ಮಾಡಲು ಹೋಗಿದ್ದೇವಾ, ಒಂದು ಪಕ್ಷವನ್ನು ಗುರಿಯನ್ನಾಗಿ ಮಾಡಬೇಡಿ, ಕಾನೂನು ರೀತಿ ಏನಿದೆ ನೋಟೀಸ್ ಕೊಡಿ, ನನಗೂ ಕೊಡಿ ಎಂದು ಸವಾಲು ಹಾಕಿದರು.
ಕೆಲವರು ಆರ್.ಟಿ.ಓ.ನಲ್ಲಿ ಲೂಟಿ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್‌ಗೆ ನಿಲ್ಲುತ್ತಿದ್ದಾರೆ, ಅಂತಹವರಿಗೆ ನೋಟೀಸ್ ಕೊಡುತ್ತಿಲ್ಲ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ವಿರುದ್ದ ರೇವಣ್ಣ ಗರಂ
ಬೇಲೂರು ತಾಲ್ಲೂಕಿನ ದೇವಸ್ಥಾನ ಮತ್ತು ಜಾತ್ರೆಗಳಲ್ಲಿ ಹಿಂದೂಯೇತರರಿಗೆ ಯಾವುದೇ ವ್ಯಾಪಾರ, ವಹಿವಾಟು ನಡೆಸದಂತೆ ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ರೇವಣ್ಣ, ಅಡೆತಡೆ ತರುವವರ ವಿರುದ್ಧ ಡಿಸಿ, ಎಸ್ಪಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಜಿಲ್ಲೆಯಲ್ಲಿ ಹಿಂದೂಗಳು ಬೇರೆಯಲ್ಲ, ಮುಸ್ಲಿಂರು ಬೇರೆಯಲ್ಲ, ನಾವೆಲ್ಲ ಈ‌ ಜಿಲ್ಲೆಯಲ್ಲಿ ಐಕ್ಯತೆಯಿಂದ ಜೀವನ ಸಾಗಿಸುತ್ತಿದ್ದೇವೆ, ಒಂದು ಸಮಾಜವನ್ನು ಗುರಿ ಇಟ್ಟುಕೊಂಡು ಹೋಗುವುದಾದರೆ ಖಂಡಿತ ವಿರೋಧಿಸಲಾಗುವುದು ಎಂದು ತಿಳಿಸಿದರು.
ಹಿಂದುಗಳಿರಲಿ, ಮುಸ್ಲಿಂರಿರಲಿ ಹಿಂದಿನಿಂದ ಯಾವ ಪರಿಸ್ಥಿತಿ ಇತ್ತೋ ಅದಕ್ಕೆ ಅಡ್ಡಿ ತರಬಾರದು, ಅಡ್ಡಿ ತಂದರೆ ಅವರ ಮೇಲೆ ಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು, ಪರಿಶಿಷ್ಟ, ಮುಸ್ಲಿಂ, ಕ್ರಿಶ್ಚಿಯನ್ ಸಮಾಜ ಇರಬಹುದು ಅದಕ್ಕೆ ಯಾವುದೇ ತರಹದ ಧಕ್ಕೆ ಬರದಂತೆ ನಡೆದುಕೊಳ್ಳಬೇಕು
ಕೂಲಿ ಮಾಡಿಕೊಂಡು ಜೀವನ ಮಾಡುವವರಿಗೆ ಅಡೆ ತಡೆ ತಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಯಾರೋ ನಾಲ್ಕು ಜನ ಕೇಸರಿ ಶಾಲು ಹಾಕೊಂಡು ಬಂದರೆ ಅದಕ್ಕೆ ಹೆದರಲು ಆಗಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಯಾವುದೇ ತ್ಯಾಗಕ್ಕೂ ನಾವು ಸಿದ್ದರಿದ್ದೇವೆ ಎಂದು ಹೇಳಿದರು.


ಮುಸ್ಲಿಲ್ಮಾನರಾಗಿ ಹುಟ್ಟಿದರೆ ಅವರಿಗೆ ಜೀವನ ಮಾಡಬೇಡಿ ಎನ್ನಲು ಆಗಲ್ಲ, ಪರಿಶಿಷ್ಟ ಸಮಾಜದವರು ವ್ಯಾಪಾರ ಮಾಡುತ್ತಾರೆ, ಅವರಿಗೆ ಮಾಡಬೇಡಿ ಅಂಥಾ ಹೇಳಲು ಆಗುತ್ತದಾ ಎಂದು ಪ್ರಶ್ನಿಸಿದ ಅವರು, ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಲು ಆಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಲೂರು ಜಾತ್ರೆಗೆ ಮುಸ್ಲಿಂರಿಗೆ ನಿರ್ಬಂಧ ಮಾಡಿದರೆ ನಮ್ಮ ಕಾರ್ಯಕರ್ತರಿಗೆ ಹೇಳುತ್ತೇನೆ, ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬೇಡಿ, ಜಿಲ್ಲಾಧಿಕಾರಿಗಳು, ಎಸ್ಪಿ ಅವರಲ್ಲಿ ಮನವಿ ಮಾಡುತ್ತೇನೆ ಎಂದರು.

More News