ಇವಿಎಂಗಳ ಮೇಲಿನ ಅನುಮಾನವನ್ನು ಆಯೋಗವೇ ನಿವಾರಿಸಬೇಕು: ಮೈತ್ರಿ ಸರಕಾರ ಬೀಳಿಸಲು ಕೆಲಸ ಮಾಡಿ ಓಡಿ ಹೋದ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಇವಿಎಂ ( ಎಲೆಕ್ಟ್ರಾನಿಕ್ ಮತಯಂತ್ರ) ಕಳವಿನ ಬಗ್ಗೆ ಉತ್ತರದಾಯಿತ್ವ ಯಾರದ್ದು ಎಂದು ಖಾರವಾಗಿ ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಬಗ್ಗೆ ದೇಶದಲ್ಲಿ ಅತ್ಯಂತ ಗಂಭೀರವಾಗಿ ಚರ್ಚೆ ಮಾಡಬೇಕಿದೆ ಎಂದರು.
ಅಲ್ಲದೆ, ಇವಿಎಂಗಳಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಹೊರಬಂದಾಗ ಆ ಫಲಿತಾಂಶದ ಬಗ್ಗೆ ಅನುಮಾನ ಪಡುವ ಪರಿಸ್ಥಿತಿ ಇದೆ. ಇದನ್ನು ಚುನಾವಣಾ ಆಯೋಗ ಸರಿ ಮಾಡಬೇಕು, ಇಂಥ ಅನುಮಾನಗಳನ್ನು ಅದು ನಿವಾರಿಸಬೇಕು ಎಂದು ಅವರು ಆಗ್ರಹಪಡಿಸಿದರು.
ವಿಧಾನಸಭೆಯಲ್ಲಿ ಇಂದು ಚುನಾವಣಾ ಸುಧಾರಣೆಗಳ ವಿಷಯದ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದ ಅವರು, ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯದ ವಿಚಾರವಾಗಿ ಸದನದಲ್ಲಿ ಎರಡು ದಿನ ಕಾಲ ಚರ್ಚೆಗೆ ಅವಕಾಶ ನೀಡಲಾಗಿದೆ. ನಾವು ನಾಡಿನ ಜನರಿಗೆ ಉತ್ತರದಾಯಿಯಾಗಿ ಇರಬೇಕಾಗುತ್ತದೆ. ಇವತ್ತು ಸಂವಿಧಾನದ ಇತರೆ ಅಂಗಗಳು ಸಮಾಜಕ್ಕೆ ಏನೇ ಸಮಸ್ಯೆ ಆದರೂ ಉತ್ತರದಾಯಿ ಆಗಲ್ಲ. ಆದರೆ, ಕಾರ್ಯಾಂಗವಷ್ಟೆ ಉತ್ತರದಾಯಿ ಆಗಿರುತ್ತದೆ. ಅದಂದರೆ, ಶಾಸಕರು ಉತ್ತರದಾಯಿ ಆಗಿರುತ್ತಾರೆ.
ಫಲಿತಾಂಶದ ಬಗ್ಗೆ ಅನುಮಾನ
ಚುನಾವಣಾ ಆಯೋಗದಲ್ಲಿರುವ ನ್ಯೂನ್ಯತೆಗಳ ಬಗ್ಗೆ ಹೆಚ್.ಕೆ.ಪಾಟೀಲ್ ಸೇರಿದಂತೆ ಅನೇಕರು ಸುಧೀರ್ಘ ಚರ್ಚೆ ಮಾಡಿದ್ದಾರೆ. ಇವಿಎಂ ಕಳವಿಗೆ ಯಾರು ಉತ್ತರದಾಯಿತ್ವರು? ಇದರ ಹೊಣೆಯನ್ನು ಜನಪ್ರತಿನಿದಿಗಳೇ ಹೊರಬೇಕಾ ಅನ್ನುವುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇವತ್ತು ಮತಯಂತ್ರಗಳ ಮತದಾನದ ಫಲಿತಾಂಶ ಬಂದಾಗ ಅಭ್ಯರ್ಥಿಗಳು ಅನುಮಾನ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದನ್ನು ಚುನಾವಣಾ ಆಯೋಗ ಸರಿಪಡಿಸಬೇಕು. ಇವುಗಳ ಬಗ್ಗೆ ಬಹಳ ಗೊಂದಲ ಇದೆ.
ಪ್ರತಿ ಚುನಾವಣೆ ಬಂದಾಗಲೂ ಇವಿಎಂ ಬಗ್ಗೆ ಮಾತನಾಡುತ್ತೇವೆ. ಇದನ್ನು ಎಷ್ಟು ವರ್ಷ ಅಂತ ಮುಂದುವರೆಸಿಕೊಂಡು ಹೋಗಬೇಕು? ನಾವೆಲ್ಲರೂ ಮುಕ್ತವಾಗಿ ಚರ್ಚೆ ಮಾಡಬೇಕಾದ ವಿಚಾರ ಇದು. ಇದು ಚುನಾವಣಾ ಪದ್ಧತಿ ಸುಧಾರಣೆ ತರಲು ಮೊದಲ ಹೆಜ್ಜೆಯಾಗಿದೆ. ಮೊದಲ ಚುನಾವಣೆ ಆರಂಭವಾದಾಗಿನಿಂದ ಹಿಡಿದು ಈವರೆಗೆ 17 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ನಾವು ಯಾರನ್ನೂ ಬೊಟ್ಟು ಮಾಡಿ ತೋರಿಸಲು ಆಗಲ್ಲ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ನೋಡಿದ್ದೆವು.1972-73 ಚುನಾವಣೆಯಲ್ಲಿ ಹಳ್ಳಿಗಳಲ್ಲಿ ಅಭ್ಯರ್ಥಿಗಳು ಆದಾಗ ಜನರೇ ಹಣ ಕೊಟ್ಟು ಚುನಾವಣೆ ನಡೆಸುತ್ತಿದ್ದರು. ಚುನಾವಣೆಯ ಎರಡು ದಿನ ಮೊದಲು ಅಭ್ಯರ್ಥಿಗಳು ಆಮಿಷ ಒಡ್ಡಬಾರದು ಅಂತ ರಸ್ತೆಗೆ ಅಡ್ಡವಾಗಿ ಕಲ್ಲು, ಮರ ಹಾಕುತ್ತಿದ್ದರು. ಈಗ ಅಂತ ವಾತಾವರಣ ಇಲ್ಲ.
ಹಳ್ಳಿಗರ ಬಗ್ಗೆ ಲಘುವಾಗಿ ಮಾತನಾಡಬೇಡಿ
ನಿನ್ನೆ ಅನಕ್ಷರಸ್ಥರ ಬಗ್ಗೆ ಯಾರೋ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆಯನ್ನು ಹಬ್ಬದ ವಾತಾವರಣದಲ್ಲಿ ಆಚರಿಸೋದು ರೈತರು ಮತ್ತು ಕೂಲಿಯ ವರ್ಗ ಮಾತ್ರ. ಸೌಲಭ್ಯ ಪಡೆಯಲು, ಧ್ವನಿ ಎತ್ತುವ ಜನರ ಸಂಖ್ಯೆ ಕಡಿಮೆ. ಲಘುವಾಗಿ ಮಾತನಾಡುವ ವರ್ಗ ಚುನಾವಣೆಗೆ ಬರೋದು ಕಡಿಮೆ. ಚುನಾವಣೆ ಬಂದಾಗ ವಿಶ್ವಾಸದಿಂದ ಬರುವ ಜನ ಕೂಲಿ ವರ್ಗದ ಜನ. ಅಂದಿನ ಹಾಗೂ ಇಂದಿನ ಚುನಾವಣೆ ಎಲ್ಲಿಗೆ ಬಂದಿದೆ ಅಂತ ನೋಡಿದ್ದೇವೆ.
ಟಿ ಎನ್ ಶೇಷನ್ ಅವರು ಚುನಾವಣೆಯ ವ್ಯವಸ್ಥೆ ಸಂಪೂರ್ಣ ಸರಿಪಡಿಸಲಾಗದಿದ್ದರೂ ಭಯದಿಂದ ಚುನಾವಣೆ ನಡೆಸುವಂತೆ ಮಾಡಿದರು. ನಂತರ ಹಾಗೆ ಯಾರೂ ಕೆಲಸ ಮಾಡಲಿಲ್ಲ. ಏನೇ ಮಾಡಿದರೂ ಎಲ್ಲರೂ ರಾಜಕಾರಣಿಗಳ ವಿರುದ್ಧವೇ ಬೊಟ್ಟು ಮಾಡುತ್ತಾರೆ. ಹಾಗಾದರೆ; ನ್ಯಾಯಾಧೀಶರು, ಸಮಾಜವಾದಿಗಳು, ಪತ್ರಕರ್ತರ ಬಗ್ಗೆ ಪ್ರಶ್ನೆ ಮಾಡೋದು ಯಾರು? ಟಿ.ವಿ ಚಾನಲ್‌ಗಳೇ ದೂರು ತೆಗೆದುಕೊಳ್ಳುತ್ತಾರೆ, ಚರ್ಚೆ ಮಾಡುತ್ತಾರೆ, ಅವರೇ ತೀರ್ಪು ನೀಡುತ್ತಾರೆ.
ಮಾಧ್ಯಮಗಳತ್ತ ಬೊಟ್ಟು
ಕಳೆದ ಎರಡೂ ಮೂರು ತಿಂಗಳಿಂದ ಇದೇ ನಡೆಯುತ್ತಿದೆ. ಮಾಧ್ಯಮ ವರದಿಗಳು ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುತ್ತಿವೆ. ವಾಹಿನಿಗಳಿಗೆ TRP ಅಷ್ಟೇ ಮುಖ್ಯ. ಸಮಾಜದಲ್ಲಿ ದೊಡ್ಡ ಬಿರುಕನ್ನೇ ಸೃಷ್ಟಿ ಮಾಡಲಾಗಿದೆ. ಮಾದ್ಯಮ ಒಂದೇ ಅಲ್ಲ, ಎಲ್ಲರೂ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಇವತ್ತು ವ್ಯವಸ್ಥೆ ಸರಿಪಡಿಸೋದು ಜನ ಪ್ರತಿನಿಧಿಗಳು ಮಾತ್ರ ಅಲ್ಲ, ನಾಡಿನ ಆರೂವರೆ ಕೋಟಿ ಜನರ ಕೈಯಲ್ಲಿದೆ.
ಶ್ರೀಲಂಕಾಗೆ ಓಡಿ ಹೋದ
ಅಭ್ಯರ್ಥಿಗಳು ಪೂರ್ವ ಚರಿತ್ರೆ ನೀಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಬೆಟ್ಟಿಂಗ್ ನಡೆಸುವ ವಿಚಾರಕ್ಕೆ ಬ್ರೇಕ್ ಬೀಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದೆ ನಾನು. ಕ್ರಿಕೆಟ್ ಬೆಟ್ಟಿಂಗ್ ಮಾಡ್ತಿದ್ದವನ ಹಿಡಿಯಲು ಹೋದಾಗ, ಶ್ರೀಲಂಕಾಗೆ ಓಡಿಹೋದ. ಅವನೇ ಮೈತ್ರಿ ಸರಕಾರ ಬೀಳಿಸಲು ಎಲ್ಲಾ ರೀತಿಯ ಕೆಲಸ ಮಾಡಿದ. ಅದರ ಲಾಭವನ್ನೂ ಯಾರೆಲ್ಲಾ ಪಡೆದುಕೊಂಡರು ಅಂತ ಮಾಧ್ಯಮಗಳಲ್ಲಿ ಚರ್ಚೆ ಮಾಡಲ್ಲ.
ಇನ್ನು; ಲಂಚ, ಕಮೀಷನ್ ಪಡೆಯುವವನ ಮಾತ್ರವಲ್ಲದೆ, ಕೊಡುವವನ ಮೇಲೂ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ಸದಸ್ಯರು ನಮ್ಮ‌ತೋಟಕ್ಕೆ ಬಂದಿದ್ದರು. ನರೇಗಾ ಕೆಲಸ ಮಾಡಲು ನಮ್ಮ ಹೆಂಡತಿ ಒಡವೆ ಇಟ್ಟು ಕೆಲಸ ಮಾಡಿದೆವು. ಆದರೆ ಹಣ ನೀಡಿಲ್ಲ,‌ ಈಗ ಮನೆಲ್ಲಿ ಊಟ ಹಾಕುತ್ತಿಲ್ಲ. ಕೊನೆಗೆ ನಾವು ಊರಿಗೆ ಹೋಗಲ್ಲ, ಇಲ್ಲೇ ತೋಟದಲ್ಲಿ ಕೆಲಸ ಮಾಡುತ್ತೇವೆ ಅಂತ ನಿರ್ಧಾರಕ್ಕೆ ಬಂದರು. ಸಚಿವ ಕೆ.ಎಸ್.ಈಶ್ವರಪ್ಪ ಅವರ ಇಲಾಖೆಯಲ್ಲಿ ಹೀಗಾಗಿದೆ ಎಂದರು.

More News