DUPLICATE HINDUISM: ಹಿಂದುತ್ವದ ಹೆಸರೇಳಿಕೊಂಡು ʼಹಿಂದುತ್ವದ ವಿನಾಶʼ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು : ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು : ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ ಎಂಗು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಯುಗಾದಿ ಪರ್ವ ದಿನದಂದು ನಾವೆಲ್ಲ ಒಂದು ಸಂಕಲ್ಪ ಮಾಡೋಣ. ಕರ್ನಾಟಕವು ಕರ್ನಾಟಕವಾಗಿಯೇ ಉಳಿಯಬೇಕೆಂಬ ಆಶಯದಿಂದಲೇ ಈ ಸಂಕಲ್ಪ ಮಾಡೋಣ ಎಂದು ಅವರ ಸರಣಿ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ.
ಕುರ್ಚಿ ಹಿಡಿಯಲು ಮನಸ್ಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಟ್ಟು ಮನೆ ಮುರುಕರೂ ಆಗುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ʼಹಿಂದುತ್ವದ ವಿನಾಶʼ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ ಎಂದು ಕರೆನೀಡಿದ್ದಾರೆ.
ತಲೆತಲಾಂತರಗಳಿಂದ ಯುಗಾದಿ ಇದೆ, ವರ್ಷತೊಡಕೂ ಇದೆ, ಹಲಾಲೂ ಇದೆ. ʼಹಲಾಲ್ ಹಾಲಾಹಲʼವನ್ನು ಈಗ ಸೃಷ್ಟಿಸಲಾಗಿದೆ. ಹಲಾಲು, ಜಟ್ಕಾ ಎಂದು ಜನರನ್ನು ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತಗಿಟ್ಟಿಸುವ ಗಿಡುಗಗಳಿವೆ. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಜನ್ಮ ಪಡೆದು ರಕ್ಕಸರೂಪದಲ್ಲಿ ಬೆಳೆದಿರುವ ಪಕ್ಷದ ಬಾಲಂಗೋಚಿಗಳಿವು. ಇವರು ನೈಜ ಹಿಂದುಗಳೇ ಅಲ್ಲ ಎಂದಿದ್ದಾರೆ.
ತಲೆತಲಾಂತರಗಳಿಂದ ಇಲ್ಲದ ʼಆಹಾರ ತಾರತಮ್ಯʼ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ʼರೋಡ್ ಮ್ಯಾಪ್ʼ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ವಸಮಾನ, ಸರ್ವಹಕ್ಕು, ಸರ್ವಕಲ್ಯಾಣ; ಅಂದರೆ, ʼಸರ್ವೇ ಜನಾಃ ಸುಖಿನೋ ಭವಂತುʼ ಎಂಬ ಆಶಯವುಳ್ಳ ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ ಎಂದಿದ್ದಾರೆ.
ಅನ್ನ-ಆಹಾರದಲ್ಲಿ ಅರಾಜಕತೆ ಉಂಟು ಮಾಡಿ ಬೇಳೆ ಬೇಯಿಸಿಕೊಳ್ಳುವವರು ʼಭಾರತಕ್ಕೆ ಮತ್ತು ಭಾವೈಕ್ಯ ಪರಂಪರೆಗೆ ದೊಡ್ಡ ಅಪಾಯ.ʼ ಮನಸುಗಳ ನಡುವೆ ಯುದ್ಧವನ್ನೇ ಸೃಷ್ಟಿಸುತ್ತಿರುವ ಈ ಕಿಡಿಗೇಡಿಗಳು ಯುದ್ಧೋನ್ಮಾದ ಸರ್ವಾಧಿಕಾರಿಗಳಿಗಿಂತಲೂ ವಿನಾಶಕಾರಿ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಹೇಳಿದ್ದಾರೆ.
ಯುಗಾದಿ ಹಬ್ಬದ ದಿನ ನೈಜ ಹಿಂದುಗಳು ಯಾರೂ ಮಾಂಸ ಮಾರುವುದಿಲ್ಲ, ಖರೀದಿಸುವುದೂ ಇಲ್ಲ. ಆದರೆ, ಜಟ್ಕಾ ಕಟ್ ಹೆಸರಿನಲ್ಲಿ ಕೆಲವರು ಇವತ್ತೇ ಮಾಂಸದ ಅಂಗಡಿಗಳನ್ನು ತೆರೆದಿದ್ದಾರೆ! ಇವರಾ ಹಿಂದುಗಳು? ʼಇಂಡಿಯಾದಿಂದಲೇ ಹಿಂದೂ ಧರ್ಮವನ್ನು ಮೂಲೋತ್ಪಾಟನೆ ಮಾಡುವುದೇ ಇವರ ಹಿಡನ್ ಅಜೆಂಡಾ ಆಗಿದೆʼ ಎನ್ನುವುದು ನನ್ನ ಅಭಿಪ್ರಾಯ ಎಂದು ಕಿಡಿಕಾರಿದ್ದಾರೆ.
ಅನಾದಿ ಕಾಲದಿಂದ ಯುಗಾದಿ, ವರ್ಷತೊಡಕನ್ನು ನಾವೆಲ್ಲರೂ ಆಚರಿಸಿದಂತೆ, ಈ ವರ್ಷವೂ ಆಚರಿಸೋಣ. ʼಭಾರತವನ್ನು ಒಡೆಯುವ ವಿಷಬೀಜಾಸುರರನ್ನು ಹಿಮ್ಮೆಟ್ಟಿಸೋಣ.ʼ ಸರ್ವ ಜನಾಂಗದ ತೋಟ ಕರುನಾಡಿನಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಮನವಿ ಇದು. ಇಡೀ ದೇಶಕ್ಕೆ ಮಾದರಿಯಾದ ನೆಮ್ಮದಿಯ ಕರುನಾಡನ್ನು ಕಾಪಾಡಿಕೊಳ್ಳೋಣ.
ಕರ್ನಾಟಕವು ಎಲ್ಲರನ್ನೂ ಒಳಗೊಳ್ಳುವ ಶುದ್ಧ ಅಂತಃಕರಣದ ಮನಸುಗಳದ್ದು. ಭಾವನೆಗಳ ಕೆಂಡದ ಮಳೆ ಸುರಿಸುವ ಕಿರಾತಕರದ್ದಲ್ಲ. ಜನಪೀಡಕರನ್ನು ತಿರಸ್ಕರಿಸೋಣ. ಪರಂಪರಾಗತವಾಗಿ ಬಂದಿರುವ ಯುಗಾದಿ, ವರ್ಷತೊಡಕನ್ನು ಎಂದಿನಂತೆ ಸಂಭ್ರಮಿಸುವ ಮೂಲಕ ಇವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ ಎಂದು ಕರೆ ನೀಡಿದ್ದಾರೆ.

More News