ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ವರದಿ ಬರುವವರೆಗೂ ರಾಜೀನಾಮೆ ಇಲ್ಲ ಎಂದು ಪರೋಕ್ಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಆರ್ ಟಿ ನಗರದಲ್ಲಿರುವ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸಂತೋಷ್ ಪ್ರಾಥಮಿಕ ತನಿಖೆ ಆಗುತ್ತಿದೆ, ಅದರ ಆಧಾರದ ಮೇಲೆ ಮುಂದಿನ ತನಿಖೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಶ್ವರಪ್ಪ ವಿಷಯದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಏನು ಇಲ್ಲ, ಅವರು ಬರೀ ಮಾಹಿತಿ ಪಡೆದಿದ್ದಾರೆ ಅಷ್ಟೇ ಎಂದು ಅವರು ಮುಖ್ಯಮಂತ್ರಿ ಅವರು ಸಮಜಾಯಿಸಿ ನೀಡಲು ಮುಂದಾದರು, ಹಾಗೆಯೇ, ಇದರಲ್ಲಿ ಅವರ ರೋಲ್ ಏನಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಇಷ್ಟೊಂದು ದೊಡ್ಡ ರೀತಿಯಲ್ಲಿ ಕಮಿಷನ್ ದಂಧೆ ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಏನೂ ರೋಲ್ ಇಲ್ಲಾ ಅದ್ರೆ, ಹೇಗೆ ಎಂಬ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ. ಪ್ರಾಥಮಿಕ ತನಿಖೆ ಆಗುವವರೆಗೂ ಯಾವುದೇ ರೀತಿಯ ಕ್ರಮ ಇಲ್ಲ ಎಂದು ಹೇಳಿದ ಸಿಎಂ, ಪ್ರತಿಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಹಲವು ಕೊಲೆಗಳಾದವು, ಕೊಲೆಗಳನ್ನು ಮಾಡಿದವರ ವಿರುದ್ಧ ಕೇಸ್ ಗಳನ್ನು ವಾಪಸ್ ಪಡೆದರು, ಇದರಿಂದ ಆಗ ಅರಾಜಕತೆ ಉಂಟಾಗಿತ್ತು, ಹಾಗಾಗಿ ಜನ ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದರು ಎಂದರು.
ಆದರೆ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ನಡೆಯುತ್ತಿರುವ ಸರ್ಕಾರ ಎಂಬ ಪ್ರತಿಪಕ್ಷದವರ ವಾಗ್ದಾಳಿಗೆ ಮುಖ್ಯಮಂತ್ರಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕಾಂಗ್ರೆಸ್ ನವರಿಗೆ ಪ್ರತಿಭಟನೆ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ನವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ಸಂತೋಷ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ಆಗುತ್ತೆ, ಸತ್ಯ ಹೊರಗೆ ಬರುತ್ತೆ, ಈ ಹಿಂದೆ ಸಿದ್ದರಾಮಯ್ಯ ನಮ್ಮ ಮೇಲೂ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಬಳಿ ಏನೇ ದಾಖಲೆಗಳಿದ್ದರೂ ಅದನ್ನು ತನಿಖಾ ಸಂಸ್ಥೆ ಮುಂದೆ ನೀಡಲಿ ಎಂದು ಅವರು ಒತ್ತಾಯಿಸಿದರು.




