ಬೆಳಗಾವಿ: ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ, ಕೊಲೆಯಾಗಿದ್ದು ಈ ಬಗ್ಗೆ ಸಿಬಿಐನಿಂದ ತನಿಖೆ ನಡೆಯಬೇಕು. ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು ನನಗೆ ನ್ಯಾಯ ಸಿಗಬೇಕು ಎಂದು ಮೃತ ಸಂತೋಷ ಪತ್ನಿ ಜಯಶ್ರೀ ಪಾಟೀಲ್ ಹೇಳಿದ್ದಾರೆ.
ಸಮರ್ಥ ಕಾಲೋನಿಯ ಮನೆಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಈಶ್ವರಪ್ಪ ಕೇಳಿರುವ ಕಮಿಷನ್ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದರು. 4 ಕೋಟಿ ಕಾಮಗಾರಿ ಮಾಡಿದ್ದೇನೆ. ಈಶ್ವರಪ್ಪ ಶೇ. 40ರಷ್ಟು ಕಮಿಷನ್ ಕೇಳುತ್ತಿದ್ದಾರೆ. 40ರಷ್ಟು ಕಮಿಷನ್ ಕೊಟ್ಟರೆ ನಾನು ಸಂಪೂರ್ಣ ಹಾಳಾಗುತ್ತೇನೆ ಎಂದು ನನ್ನ ಗಂಡ ನನ್ನೊಂದಿಗೆ ಹೇಳುತ್ತಿದ್ದರು ಎಂದರು.
ಸೋಮವಾರ ಸಂಜೆ ಏಳಕ್ಕೆ ನನ್ನ ಮತ್ತು ಮಗನ ಜೊತೆಗೆ ಚೆನ್ನಾಗಿಯೇ ಮಾತನಾಡಿದ್ದರು. ನೆಟ್‌ವರ್ಕ್ ಸಿಗುತ್ತಿಲ್ಲ. ಬೆಳಿಗ್ಗೆ ಮಾತನಾಡುತ್ತೇನಿ ಅಂತ ನನ್ನ ಜೊತೆಗೆ ನಗು, ನಗುತ್ತಲೇ ಮಾತನಾಡಿದ್ದರು. ಬೆಳಿಗ್ಗೆ ಫೋನ್ ಮಾಡಿದರೆ ಫೋನ್ ರಿಸೀವ್ ಮಾಡಲಿಲ್ಲ. ಬೇರೆಯವರ ಮೂಲಕ ವಿಷಯ ಗೊತ್ತಾಯಿತು ಎಂದು ಕಣ್ಣೀರು ಹಾಕಿದರು. ಸಾಲಸೋಲ ಮಾಡಿ ಸ್ವ ಗ್ರಾಮದಲ್ಲಿ ಕನಸಿನ ಮನೆ ಕಟ್ಟಿಸಿದ್ದರು. ಅದು ಅವರ ಕನಸಿನ ಮನೆ ಆಗಿತ್ತು. ಅದಕ್ಕೆ ಕನಸು ಅಂತಾನೇ ಹೆಸರು ಇಟ್ಟಿದ್ದರು. ಸದ್ಯ ಕಾಮಗಾರಿ ಬಿಲ್ ಬರುತ್ತದೆ.

ಮುಂದಿನ ತಿಂಗಳು ಮನೆ ಗೃಹಪ್ರವೇಶ ಮಾಡೋಣ ಎಂದು ಹೇಳುತ್ತಿದ್ದರು. ಆದರೀಗ ಎಲ್ಲವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ನನ್ನ ಮಗನನ್ನು ಅನಾಥರಾಗಿ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಸಚಿವ ಈಶ್ವರಪ್ಪಗೆ ಶಿಕ್ಷೆ ಆಗಲೇಬೇಕು ಎಂದು ದುಃಖ ತೋಡಿಕೊಂಡರು.
ಸಂತೋಷ್ ಜಮೀನಿನಲ್ಲೇ ಅಂತ್ಯಕ್ರಿಯೆ
ಗುತ್ತಿಗೆದಾರ ಸಂತೋಷ ಪಾಟೀಲ್ ಮೃತದೇಹದ ಅಂತಿಮ ಸಂಸ್ಕಾರವನ್ನು ಇಂದು ಮಾಡಲಾಯಿತು. ಮೆರವಣಿಗೆ ಮೂಲಕ ಮೃತದೇಹವನ್ನು ತಂದು, ಸಂತೋಷ ಪಾಟೀಲ್ ಅವರ ಜಮೀನಿನಲ್ಲೇ ಅಂತ್ಯ ಸಂಸ್ಕಾರ ನೇರವೇರಿಸಲಾಯಿತು.

ಆ್ಯಂಬುಲೆನ್ಸ್ ನಿಂದ ಶವ ಕೆಳಗಿಳಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ಅಂತ್ಯ ಸಂಸ್ಕಾರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.





