CONGRESS PROTEST: ಸಚಿವ ಈಶ್ವರಪ್ಪವನ್ನು ವಜಾಕ್ಕಾಗಿ ಆಗ್ರಹಿಸಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಿಂದ ಅಹೋರಾತ್ರಿ ಧರಣಿ

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪ್ರಕರಣದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ವಿಧಾನಸೌಧದ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ರಾಜ್ಯ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ವಿಧಾನಸೌಧದ ಆವರಣದಲ್ಲಿ ಇಂದು ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ವತಿಯಿಂದ 24 ಗಂಟೆಗಳ ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಇಂದು ಇಡೀ ರಾತ್ರಿ ಹಾಗೂ ನಾಳೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು. ಇದಾದ ಬಳಿಕ ನಾವು ರಾಜ್ಯ ವ್ಯಾಪಿ ಪ್ರವಾಸ ಕೈಗೊಂಡು ಪಕ್ಷದ ನಾಯಕರ ನೇತೃತ್ವದಲ್ಲಿ ಈಶ್ವರಪ್ಪ ವಜಾಕ್ಕಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಬಿಜೆಪಿ ಪಕ್ಷದ ಮುಖಂಡರು ಇದನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಡಿಕೆ ಶಿವಕುಮಾರ್, ಸಿಎಂ ಮನೆಗೆ ಮುತ್ತಿಗೆ ಹಾಕಲು ಹೋದರೆ ನಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
ಶಾಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರ್ಯಾರು ಏನೇನು ಬಿಚ್ಚುತ್ತಾರೋ ನೋಡಿದ್ದೀರಲ್ಲಾ, ಅವರು ಇನ್ನಷ್ಟು ಬಿಚ್ಚಲಿ ಎಂದು ವ್ಯಂಗ್ಯವಾಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೋಗಿ ಅಲ್ಲಿ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕಲು ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೊಂದು ಅತೀ ಭ್ರಷ್ಟ ಸರ್ಕಾರ, ಅತ್ಯಂತ ಕೆಟ್ಟ ಆಡಳಿತ ರಾಜ್ಯದಲ್ಲಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರದ ಗಂಗೋತ್ರಿಯ ಅಧ್ಯಕ್ಷ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಅತೀ ಹೆಚ್ಚಿನ ಹಣ ಅವರಿಗೆ ಸಲ್ಲುತ್ತಿದೆ ಎಂದು ಆರೋಪಿಸಿದ ಅವರು, ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಆರೋಪಿ ನಂಬರ್ ಒನ್, ಮುಖ್ಯಮಂತ್ರಿ ಭ್ರಷ್ಟಾಚಾರದಲ್ಲಿ ಭಾಗಿ ಆದ್ದರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

More News