ಶಿವಮೊಗ್ಗ: ನನಗೆ ಇದೊಂದು ಅಗ್ನಿ ಪರೀಕ್ಷೆ, ಈ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬರುವ ವಿಶ್ವಾಸವಿದೆ. ಕಾರ್ಯಕರ್ತರು ಭಾವುಕರಾಗುವುದು ಬೇಡ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ಬೆಂಗಳೂರಿಗೆ ತೆರಳಿ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು. ಬೆಂಗಳೂರಿಗೆ ಹೊರಡುವ ಮುನ್ನಾ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನನಗೆ ನಮ್ಮ ಕಾರ್ಯಕರ್ತರು ಮುಖಂಡರು, ಪೂರ್ವಜರು ಹಾಗೂ ಸ್ವಾಮೀಜಿಗಳ ಪೂರ್ಣ ಆಶಿರ್ವಾದವಿದೆ, ನನ್ನ ವಿರುದ್ಧ ಮಾಡಿರುವ ಷಢ್ಯಂತರ ಆರೋಪದಿಂದ ಮುುಕ್ತವಾಗಿ ಹೊರಬರುತ್ತೇನೆಂಬ ವಿಶ್ವಾಸ ನನಗಿದೆ. ಇಂದು ಸಂಜೆ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಯಡಿಯೂರಪ್ಪನವರಿರಬಹುದು, ಬೊಮ್ಮಾಯಿಯವರಿರಬಹುದು ರಾಜ್ಯದ ಎಲ್ಲಾ ಶಾಸಕರು ಇಡಿ ರಾಜ್ಯದ ಕಾರ್ಯಕರ್ತರು ಸ್ವಾಮೀಜಿಗಳು ನನ್ನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ನಾನು ಕೂಡ ಭಾವುಕನಾಗಿದ್ದೇನೆ. ಇಷ್ಟೊಂದು ಪ್ರೀತಿ ಸಿಗುತ್ತದೆಂಬ ಕಲ್ಪನೆ ನನಗಿರಲಿಲ್ಲ. ಹೀಗಾಗಿ ಷಡ್ಯಂತ್ರ ಮಾಡಿದ ವ್ಯಕ್ತಿಗಳಿಗೆ ಇವರೆಲ್ಲರ ಪ್ರೀತಿಯಿಂದಲೇ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ,
ಇವತ್ತು ನಾನು ರಾಜಿನಾಮೆ ನೀಡಿರುವುದಕ್ಕೆ ಹೆಣ್ಣುಮಕ್ಕಳು ಕೂಡ ಕಣ್ಣೀರಾಕುತ್ತಿದ್ದಾರೆ. ನಾನು ಖಂಡಿತ ಆರೋಪ ಮುಕ್ತನಾಗಿ ಹೊರಬರುತ್ತೇನೆಂಬ ವಿಶ್ವಾಸವಿದೆ.

ನನ್ನ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಜಲಧಾರೆ ಯೋಜನೆಯಲ್ಲಿ ನಮ್ಮ ರಾಜ್ಯ ಮೊದಲು ನರೇಗಾ ಯೋಜನೆಯಲ್ಲೂ ರಾಜ್ಯ ಮಂಚೂಣಿ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಈಶ್ವರಪ್ಪ ಹೇಳಿದ್ದಾರೆ.




