ಗುಜರಾತ್ : ಆಂಜನೇಯ ಎಂದರ ಧೈರ್ಯ, ಶಕ್ತಿ ಹಾಗೂ ಸಂಯಮದ ಪ್ರತೀಕ, ಈ ಪವನ ಪುತ್ರನ ಕೃಪೆಯಿಂದ ಪ್ರತಿಯೊಬ್ಬರ ಇಷ್ಟಾರ್ಥ ಸಿದ್ದಿಯಾಗಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನ ಮೋರ್ಬಿ ಜಿಲ್ಲೆಯಲ್ಲಿ 108 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ವರ್ಚ್ಯುವಲ್ ಆಗಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಹನುಮಜಯಂತಿ ಹಿನ್ನೆಲೆಯಲ್ಲಿ ಈ ಪ್ರತಿಮೆ ಅನಾವರಣಗೊಂಡಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಹನುಮನ ಈ ವಿಗ್ರಹವನ್ನು ಮೋರ್ಬಿ ಜಿಲ್ಲೆಯ ಬಾಪು ಕೇಶವಾನಂದ ಆಶ್ರಮದಲ್ಲಿ ನಿರ್ಮಿಸಲಾಗಿದ್ದು, ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಹನುಮಂತನ ಪ್ರತಿಮೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. ಇದಕ್ಕೆ ಹನುಮಾನ್ ಜಿ ಚಾರ್ ಧಾಮ್ ಎಂದು ಹೆಸರಿಸಲಾಗಿತ್ತು.

ಈ ನಾಲ್ಕು ಹನುಮಾನ್ ಪ್ರತಿಮೆಗಳಲ್ಲಿ ಗುಜರಾತ್ ನಲ್ಲಿ ನಿರ್ಮಾಣವಾಗಿದ್ದು ಎರಡನೇಯದ್ದಾಗಿದೆ. ಮೊದಲನೆಯದ್ದು ಶಿಮ್ಲಾದಲ್ಲಿ ಈಗಾಲಲೇ ಅಂದರೆ 2010ರಲ್ಲಿ ನಿರ್ಮಾಣಗೊಂಡಿತ್ತು. ಇನ್ನು ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಹನುಮಾನ್ ವಿಗ್ರಹ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಹನುಮ ಜಯಂತಿಯ ಶುಭಾಶಯವನ್ನು ಕೋರಿದ್ದು, ನಾಡಿನ ಜನತೆಯಲ್ಲಿ ಧೈರ್ಯ, ಶಕ್ತಿ ಸಂಯಮ ಬರಲಿ ಎಂದು ಆಶಿಸಿದ್ದಾರೆ.





