ಬೆಂಗಳೂರು : ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ ಸುಮಾರು 1.30ರ ಸಮಯದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ವೇಗವಾಗಿ ಬಂದ ಆಡಿ ಕಾರು ಚಾಲಕನ ನಿಯಂತ್ರಣ ತಪ್ಪ ಫುಟ್ ಪಾತ್ ಮೇಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ 7 ಮಂದಿ ಅಸುನೀಗಿದ್ದಾರೆ.
ಕಾರಿನ ಮುಂಬದಿ ಸೀಟಿನಲ್ಲಿ ಮೂವರು ಹಿಂದೆ ನಾಲ್ವರು ಕುಳಿತಿದ್ದರು. ಎಲ್ಲರೂ 25-30ರ ವಯೋಮಾನದವರು ಮತ್ತು ಸ್ನೇಹಿತರು. ಮೃತರಲ್ಲಿ ದಂಪತಿ ಸಹ ಸೇರಿದ್ದಾರೆ. ಕರುಣಾಸಾಗರ , ಬಿಂದು (28) – ದಂಪತಿ, ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ (23) ಮೃತರಾಗಿದ್ದಾರೆ.
ಅಕ್ಷಯ್ ಗೋಯಲ್ ಕೇರಳಾ ಮೂಲದವರಾಗಿದ್ದು, ಉತ್ಸವ್ – ಹರ್ಯಾಣ, ರೋಹಿತ್ – ಹುಬ್ಬಳ್ಳಿ, ಕರುಣಾ ಸಾಗರ್ ಹೊಸೂರು ಮೂಲದವರಾಗಿದ್ದಾರೆ. ಉಳಿದವರು ಕೋರಮಂಗಲದ ಜೋಲೋ ಸ್ಟೇ ಪಿ.ಜಿಯಲ್ಲಿ ವಾಸವಾಗಿದ್ದರು. ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶಾಸಕರಪುತ್ರ : ಕರುಣಾ ಸಾಗರ್
ಮೃತ ಕರುಣಾ ಸಾಗರ್ ಹೊಸೂರು ಎಂ ಎಲ್ ಎ ಪ್ರಕಾಶ್ ಅವರ ಪುತ್ರ. ಈಗಾಗಲೆ ಪ್ರಕಾಶ್ ಅವರಿಗೆ ಮಾಹಿತಿಯನ್ನ ಪೊಲೀಸರು ನೀಡಿದ್ದಾರೆ.
ಅತಿವೇಗವಾಗಿ ಬಂದ ಕಾರು ಅಪಘಾತವಾಗಿತ್ತು. ಅಪಘಾತದ ಸದ್ದು ಕೇಳಿ ಮನೆಯಿಂದ ಹೊರಗೆ ಬಂದುನೋಡಿದಾಗ ಕಾರಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಕ್ಕ ಪಕ್ಕದ ಮನೆಯವರು ಸಹ ಎದ್ದು ಬಂದು ನೀರು ತಂದು ಕಾರಿನ ಮೇಲೆ ಚೆಲ್ಲಿದರು. ಇಂಜಿನ್ ಗೆ ಬೆಂಕಿ ಅಂಟಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿ ಪ್ರಭು ಹೇಳಿದ್ದಾರೆ.




