HUBBALLI DONT ARREST INNOCENTS: ಹುಬ್ಬಳ್ಳಿಯಲ್ಲಿ ದುಷ್ಕೃತ್ಯವೆಸಗಿದವರನ್ನು ಬಿಡಬೇಡಿ: ಅಮಾಯಕರಿಗೆ ಕಿರುಕುಳ ನೀಡಬೇಡಿ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ತಿಳಿಗೇಡಿ ಯುವಕನ ಪ್ರಚೋದನಾತ್ಮಕ ಪೋಸ್ಟ್‌ʼನಿಂದ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ, ಕಿಡಿಗೇಡಿಗಳ ಜತೆಗೆ ಕೆಲ ಅಮಾಯಕರನ್ನೂ ಪೊಲೀಸರು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಉದ್ರಿಕ್ತ ಮತಿಗೇಡಿ ಯುವಕರು ಎಸಗಿದ ಕೃತ್ಯಕ್ಕೆ ಸಂಬಂಧವಿಲ್ಲದವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಅವರು, ಕೆಲ ಕುಟುಂಬಗಳ ತಂದೆ-ತಾಯಂದಿರು ನನಗೆ ನಿರಂತರವಾಗಿ ಮೊಬೈಲ್ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಪೊಲೀಸ್ ಠಾಣೆ, ಆಸ್ಪತ್ರೆ, ದೇವಾಲಯದ ಮೇಲೆ ಕಲ್ಲು ಹೊಡೆದವರನ್ನು ಬಿಡಬೇಡಿ, ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದೇನೆ.
ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಆ ದೃಶ್ಯಗಳಲ್ಲಿ ಇಲ್ಲದವರನ್ನು ಬಿಟ್ಟು ಕಳಿಸಲಾಗುವುದು ಎಂದು ಪೊಲೀಸ್ ಆಯುಕ್ತರು ನನಗೆ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಗಲಾಟೆಗೆ ಸಂಬಂಧವಿಲ್ಲದ ಮುಗ್ಧರಿಗೆ ತೊಂದರೆ ಆಗುವುದು ಬೇಡ.
ಅಂಜುಮನ್ ಸಂಸ್ಥೆ ಮುಖಂಡರ ಜತೆ ತೆರಳಿ ಪೊಲೀಸರಿಗೆ ಮನವಿ ಕೊಡಿ ಎಂದು ಈಗಾಗಲೇ ನಮ್ಮ ಪಕ್ಷದ ಮುಖಂಡರಿಗೂ ಸೂಚಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮುಗ್ಧರಿಗೆ ಅನ್ಯಾಯ ಆಗದಿರಲಿ ಎನ್ನುವುದು ನನ್ನ ಮನವಿ.
ಹುಬ್ಬಳ್ಳಿ ಸದಾ ಶಾಂತಿಯನ್ನು ಬಯಸುವ ನಗರ. ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯುಳ್ಳ ತಾಣ. ಕೆಲ ವರ್ಷಗಳಿಂದ ಇಲ್ಲಿ ಎಲ್ಲ ಸಮುದಾಯದವರು ಸಹೋದರರಾಗಿ ಬಾಳಿ ಬದುಕುತ್ತಿದ್ದಾರೆ. ಬವಣೆಯಲ್ಲಿ ಬೇಯುತ್ತಿರುವ ಬದುಕನ್ನು ಕಟ್ಟಿಕೊಳ್ಳುವ ಬದಲು ಕೋಮುದಳ್ಳುರಿ ಹರಡುವುದು ಬೇಡ. ಕರ್ನಾಟಕಸರ್ವಜನಾಂಗದಶಾಂತಿಯ_ತೋಟ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

More News