ಬೆಂಗಳೂರು: ಮಾಜಿ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವ ಮುನ್ನ ಅನೇಕ ತಂಡಗಳಿಗೆ ಟೆಂಡರ್ ಮಂಜೂರಾತಿ ನೀಡುವ ಮೂಲಕ 40% ಕಮಿಷನ್ ಪಡೆದು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತರಾತುರಿಯಲ್ಲಿ 5,500 ಕೋಟಿ ರೂಪಾಯಿ ಟೆಂಡರ್ ಗಳಿಗೆ 8 ದಿನಗಳಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಆಲಂ ಪಾಷಾ ಆರೋಪಿಸಿದರು.
ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರಪ್ಪ ರಾಜೀನಾಮೆಗೂ ಮುನ್ನ ಭಾರೀ ಪ್ರಮಾಣದ ಕಮೀಷನ್ ಅಕ್ರಮ ವ್ಯವಹಾರ ನಡೆದಿರುವ ಸಾಧ್ಯತೆಯಿದೆ. ಕೆಟಿಪಿಐ ಆಕ್ಟ್ ಪ್ರಕಾರ ಟೆಂಡರ್ ಪ್ರಕ್ರಿಯೆ ಕನಿಷ್ಟ 30 ದಿನಗಳವರೆಗೆ ಇರಬೇಕಿದೆ. ಆದರೆ ಇಲ್ಲಿ ಏ. 21ಕ್ಕೆ ಟೆಂಡರ್ ಮುಗಿಯುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತರಾತುರಿಯಲ್ಲಿ 5,500 ಕೋ ರೂ.ಗಳ ಟೆಂಡರ್ ಗಳಿಗೆ ಕೇವಲ 8 ದಿನದಲ್ಲಿ ಮಂಜೂರಾತಿ ನೀಡಲಾಗಿದೆ. ಕೆಟಿಪಿಐ ಆಕ್ಟ್ ಪ್ರಕಾರ ಟೆಂಡರ್ ಪ್ರಕ್ರಿಯೆ ಕನಿಷ್ಟ 30 ದಿನಗಳವರೆಗೆ ಇರಬೇಕು, ಆದರೆ ಇಲ್ಲಿ ಏ.21ಕ್ಕೆ ಮುಗಿಯುವಂತೆ ಕೇವಲ 8 ದಿನಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿಯ 5,500 ಕೋಟಿ ರೂಪಾಯಿಗಳ ಟೆಂಡರ್ ಗಳನ್ನು ನೀಡಲಾಗಿದೆ ಎಂದು ಆರೋಪಿಸಿದರು.
ನಿಯಮದಂತೆ ಟೆಂಡರ್ ಪ್ರಕ್ರಿಯೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸಿಲ್ಲ ಎಂದು ಆರೋಪಿಸಿದ ಅವರು, 15,000 ಕೋಟಿ ರೂಪಾಯಿಗಳ 62 ಕಾಮಗಾರಿಗಳಿಗೂ ಟೆಂಡರ್ ಕಮಿಟಿ ಒಪ್ಪಿಗೆ ನೀಡದಿದ್ದರೂ 6-10 ದಿನಗಳಲ್ಲಿ ಮಂಜೂರು ಮಾಡಲಾಗಿದೆ ಎಂದರು.
ನಿರ್ದಿಷ್ಟ ಗುತ್ತಿಗೆದಾರರಿಗೆ ಬೇಕಾದಂತೆ ಟೆಂಡರ್ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ, ಇದು ಈಶ್ವರಪ್ಪರ ಇಲಾಖೆಯಲ್ಲೊಂದಷ್ಟೇ ಅಲ್ಲ, ಇಡೀ ರಾಜ್ಯದಲ್ಲೇ ಈ ತರಹದಲ್ಲಿ ಶೇ.40ರ ಕಮಿಷನ್ ಅವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ 1 ಲಕ್ಷ ಕೋಟಿ ರೂ. ಅನುದಾನವನ್ನು ದುರ್ಬಳಕೆ ಮಾಡಲಾಗಿದೆ, ಕೇವಲ 7-8 ದಿನಗಳಲ್ಲಿ ಕಳ್ಳಹಾದಿಯಲ್ಲಿ ಟೆಂಡರ್ ಪಡೆದವರು, ಗ್ರಾಮೀಣ ಜನತೆಗೆ ಹೇಗೆ ಒಳ್ಳೆಯ ರಸ್ತೆ, ನೀರು, ಮೊದಲಾದ ಕಾಮಗಾರಿಗಳನ್ನು ಮಾಡಬಲ್ಲರು? ಎಂದು ಪ್ರಶ್ನಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಸಾವಿನ ಸಾಕ್ಷ್ಯಾಧಾರ ನಾಶ ಗುಮಾನಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಾಕ್ಷ್ಯಧಾರ ನಾಶಪಡಿಸಿರುವ ಗುಮಾನಿ ವ್ಯಕ್ತವಾಗಿದೆ. ಅಲ್ಲದೆ. ಶೇ.40 ರಷ್ಟು ಕಮೀಷನ್ ಬೇಡಿಕೆ ಆರೋಪ ಸಂಬಂಧ ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಿಸಬೇಕೆಂದು ಎಸಿಬಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಆರೋಪ ಬಂದಿದ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದೆ ಏ.15ರ ರಾತ್ರಿವರೆಗೂ ಸಮಯ ತೆಗೆದು ಕೊಂಡಿದ್ದರು. ಈ ಅವಧಿಯಲ್ಲಿ ತಮ್ಮ ಪ್ರಭಾವ ಬಳಸಿ ಸಂತೋಷ್ ಸಾವಿಗೆ ಸಂಬಂಧಿಸಿದ ಸಾಕ್ಷ್ಯನಾಶ ಮಾಡಿದ್ದಾರೆ. ಅಲ್ಲದೆ ಸಂತೋಷ್ ಕುಟುಂಬಸ್ಥರು ನೀಡಿದ ದೂರಿನಲ್ಲಿ ಶೇ.40 ರಷ್ಟು ಕಮೀಷನ್ ಕೇಳಿದ್ದರು. ಆದರೆ ಎಫ್ಐಆರ್ ನಲ್ಲಿ ಮೂಲ ಆರೋಪ ಬಗ್ಗೆ ಉಲ್ಲೇಖವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.




