ರಾಜ್ಯ ಕ್ರಿಕೆಟ್ ಸಂಸ್ಥೆ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನಿಯೋಗ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು.

ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಅಳವಡಿಸಲಾಗಿರುವ ಹೊನಲು ಬೆಳಕಿನ ಟವರ್ ಗಳ ಉದ್ಘಾಟನೆಗೆ ಆಗಮಿಸಬೇಕೆಂದು ಮುಖ್ಯಮಂತ್ರಿಗಳಿಗೆ ನಿಯೋಗ ಮನವಿ ಸಲ್ಲಿಸಿತು.

ಕೆ ಎಸ್ ಸಿ ಎ  ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ, ಗೌರವ ಕಾರ್ಯದರ್ಶಿ ಸಂತೋಷ್ ಮೆನನ್,  ಗೌರವ ಖಜಾಂಚಿ ವಿನಯ್ ಮೃತ್ಯುಂಜಯ ನಿಯೋಗದಲ್ಲಿ ಇದ್ದರು.

ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯಗಳ ಆಯೋಜನೆಯಿಂದ ಸಾಕಷ್ಟು ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಕೂಗಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪರಿಸರ ಸ್ನೇಹಿ ಸೋಲಾರ್ ಶಕ್ತಿ ಅಳವಡಿಸುವ ಮೂಲಕ ಸೂಕ್ತ ಪರಿಹಾರ ಕೊಂಡುಕೊಂಡಿದೆ.
4.1 ಮೆಗಾವ್ಯಾಟ್ ಸೋಲರ್ ಬಳಕೆ
ಫ್ಲಡ್ ಲೈಟ್ ಹೊರತುಪಡಿಸಿ ಇಡೀ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 4.1 ಮೆಗಾ ವಾಟ್ ಸೋಲಾರ್ ಶಕ್ತಿ ಘಟಕವನ್ನು ಬಳಸಲಾಗುತ್ತಿದೆ. ಪರಿಪೂರ್ಣ ಸೋಲಾರ್ ಶಕ್ತಿ ಹೊಂದಿರುವ ಜರ್ಮನಿಯ ಫ್ರೀಬರ್ಗ್ ಫುಟ್ಬಾಲ್ ಕ್ರೀಡಾಂಗಣದಿಂದ ಸ್ಫೂರ್ತಿಯುತಗೊಂಡು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 3.8 ಕೋಟಿ ರೂಪಾಯಿ ವೆಚ್ಚದಲ್ಲಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
12ಲಕ್ಷ ಯೂನಿಟ್ ವಿದ್ಯುತ್ ಉಳಿತಾಯ
ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೋಲಾರ್ ವ್ಯವಸ್ಥೆ ಅಳವಡಿಸಿರುವುದರಿಂದ ವಾರ್ಷಿಕ 12 ಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ. ಪ್ರಸ್ತುತ ಕೆಎಸ್‌ಸಿಎ, ಇಡೀ ಕ್ರೀಡಾಂಗಣಕ್ಕಾಗಿ ವಾರ್ಷಿಕ 18 ಲಕ್ಷ ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದೆ. ಆದರೆ ಇದೀಗ ಸೋಲಾರ್ ಅಳವಡಿಕೆಯಿಂದ ವಿದ್ಯುತ್ ಬಳಕೆ 6 ಲಕ್ಷ ಯೂನಿಟ್‌ಗೆ ತಗ್ಗಲಿದೆ ಎನ್ನಲಾಗಿದೆ.

More News