ಬೆಂಗಳೂರು : ರಾಜ್ಯ ಸರ್ಕಾರ ಇಂದು ಹೊಸ ಆದೇಶವೊಂದನ್ನು ಜಾರಿ ಮಾಡಿದೆ. ಈ ಆದೇಶದ ಹಿನ್ನೆಲೆಯಲ್ಲಿ ರಾತ್ರಿ ಪೂರ್ತಿ ಅಂದರೆ 24/7 ಹೋಟೆಲ್ ಗಳು ತೆರೆದಿರುತ್ತವೆ. ಇದಕ್ಕೆ ಹೋಟೆಲ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ಮತ್ತು ಬೆಲೆ ಏರಿಕೆಯ ಬಿಸಿಗೆ ಥಂಡಾ ಹೊಡೆದಿರುವ ಹೋಟೆಲ್ ಉದ್ಯಮಕ್ಕೆ ರಾಜ್ಯ ಸರ್ಕಾರ ಆಶಾದಾಯಕ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಪ್ರಯಾಣಿಕರಿಗೆ ಊಟ ತಿಂಡಿ ಸಿಗಲಿದೆ.
ರಾಜ್ಯ ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಹೋಟೆಲ್ ಗಳು, ಬೇಕರಿಗಳು, ಸ್ವೀಟ್ ಸ್ಟಾಲ್ಸ್, ಐಸ್ ಕ್ರೀಂ ಪಾರ್ಲರ್ ಗಳು ದಿನದ 24 ಗಂಟೆಯೂ ತೆರೆದಿರುತ್ತವೆ. ಇದು ರಾತ್ರಿ ಪಾಳೇಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರವಂತೂ ಈ ಆದೇಶ ಹೊರಡಿಸಿದೆ, ಆದರೆ, ಇದಕ್ಕೆ ನಗರ ಪೊಲೀಸ್ ಆಯುಕ್ತರ ಅನುಮತಿ ಬೇಕಾಗಿದೆ. ಅನುಮತಿ ಸಿಕ್ಕಿದ ಕೂಡಲೇ ರಾತ್ರಿ ಹೊತ್ತು ಹೋಟೆಲ್ ಗಳು ತೆರೆಯುತ್ತಿದ್ದು, ಇದರಿಂದ ನೈಟ್ ಜೀವನ ತೆರೆಯಲಿದೆ.

2021ರಲ್ಲಿ ರಾಜ್ಯ ಸರ್ಕಾರ ಹೋಟೆಲ್ ಗಳನ್ನು ತೆರೆಯಲು ಅನುಮತಿ ನೀಡಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಇದನ್ನು ತಡೆಹಿಡಿಯಲಾಗಿತ್ತು. ಈಗ ಕೊರೊನಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ರಾತ್ರಿ ಜೀವನಕ್ಕೆ ಅನುಮತಿ ನೀಡಿದೆ.






