HIGH LEVEL COMMITTEE: 50 ಕೋಟಿಗೂ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಿಎಂ ಬಸವರಾಜ ಬೊಮ್ಮಾಯಿ

ಶಿವಮೊಗ್ಗ : 50 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು, ಆರ್ಥಿಕ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಯ ತಾಂತ್ರಿಕ ತಜ್ಞರನ್ನು ಒಳಗೊಂಡಿರುವ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉನ್ನತ ಮಟ್ಟದ ಸಮಿತಿಯನ್ನು ಕೆಟಿಟಿಪಿ ಕಾಯ್ದೆಯನ್ವಯ ರಚಿಸಲಾಗಿದೆ. ಸಮಿತಿಯು ಕಾಮಗಾರಿಯ ಅಂದಾಜು ಮೊತ್ತ, ಕೆಟಿಟಿಪಿ ಕಾಯ್ದೆಯನ್ವಯ ಟೆಂಡರ್ ನಿಯಮಗಳು ಇವುಗಳನ್ನು ಪರಿಶೀಲಿಸಿದ ನಂತರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಬೇಕು. ಈ ಸಮಿತಿಯು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.
ಸರ್ಕಾರದ ಎಲ್ಲ ಇಲಾಖೆಗಳ 50 ಕೋಟಿ ರೂ. ಮೀರಿದ ಟೆಂಡರ್ ಗಳಿಗೂ ಈ ನಿಯಮ ಜಾರಿಯಾಗುತ್ತದೆ. ಟೆಂಡರ್ ಗಳು ಹೆಚ್ಚಾದ ಸಂದರ್ಭದಲ್ಲಿ ಶೀಘ್ರ ಟೆಂಡರ್ ಪರಿಶೀಲನೆಗೆ ಅನುಕೂಲವಾಗುವಂತೆ ಪರ್ಯಾಯ ಸಮಿತಿಯೊಂದನ್ನೂ ರಚಿಸಲಾಗುವುದು ಎಂದರು.
ಮೌಖಿಕ ಆದೇಶದ ಮೇಲೆ ಕಾಮಗಾರಿಗಳು ಮಾಡುವಂತಿಲ್ಲ
ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಮೌಖಿಕ ಆದೇಶಗಳ ಮೇಲೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೂ ಈ ರೀತಿ ನಡೆದರೆ ಸಂಬಂಧಪಟ್ಟ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್, ಎಇಇ, ಶಾಖಾಧಿಕಾರಿಗಳು ಜವಾಬ್ದಾರರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಮತ್ತು ಇಓಗಳು ಜವಾಬ್ದಾರರಾಗುತ್ತಾರೆ ಎಂದು ಸ್ಪಷ್ಟವಾದ ಲಿಖಿತ ಸೂಚನೆ ನೀಡಲಾಗುವುದು ಎಂದರು.
ಹಾಗಾದ್ರೆ ಇದುವರೆಗೂ ಮೌಖಿಕ ಆದೇಶದಿಂದ ಕೆಲಸ ನಡೆಯುತ್ತಿರಬಹುದು ಎಂಬ ಸಂಶಯ ಮೂಡುತ್ತದೆ. ಒಂದು ವೇಳೆ ಎಷ್ಟು ಮೊತ್ತದ ಕಾಮಗಾರಿಗಳನ್ನು ಮೌಖಿಕ ಆದೇಶದ ಹಿನ್ನೆಲೆಯಲ್ಲಿ ನೀಡಲಾಗುತ್ತಿತ್ತು ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಂತೋಷ್ ಪಾಟೀಲ್ ಪ್ರಕರಣ-ತನಿಖೆ ನಡೆಯುತ್ತಿದೆ
ಟೆಂಡರ್ ಪ್ರಕ್ರಿಯೆ ಹಾಗೂ ಪರ್ಸೆಂಟೇಜ್ ರಹಿತ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಂಡಿದೆಯೇ, ಸಂತೋಷ್ ಪಾಟೀಲ್ ಆತ್ಮಹತ್ಯೆ ಒಂದು ಪಾಠವಾಗಿ ಇವೆಲ್ಲಕ್ಕೆ ಒಂದು ತಾತ್ವಿಕ ಅಂತ್ಯ ಕಾಣಬೇಕು ಎಂಬುದಕ್ಕೆ ಪ್ರತಿಕ್ರಯಿಸಿ ಪರ್ಸಂಟೇಜ್ ಅನ್ನುವಂಥದ್ದು ವ್ಯಾಪಕವಾಗಿ ಮಾತನಾಡುವಂತಹ ವಿಚಾರ. ಇದನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದರು.
ಸಂತೋಷ್ ಪಾಟೀಲ್ ಪ್ರಕರಣ ಪ್ರತ್ಯೇಕವಾದದ್ದು, ಇದರಲ್ಲಿ ಕಾರ್ಯಾದೇಶವಿಲ್ಲದೇ ಕೆಲಸ ಮಾಡಿ ಬಿಲ್ ಕ್ಲೈಮ್ ಮಾಡಿರುವುದು ಆದ್ದರಿಂದ ಈ ಬಗ್ಗೆ ಆರ್ ಡಿ ಪಿಆರ್ ನಿಂದ ಹಿಡಿದು ಪೊಲೀಸ್ ಇಲಾಖೆವರೆಗೆ ತನಿಖೆ ನಡೆಯುತ್ತಿದೆ. ಇವೆರಡೂ ವಿಷಯಗಳಿಗೆ ಹೋಲಿಕೆ ಇಲ್ಲ ಎಂದರು.
ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು
ಸಂತೋಷ್ ಪಾಟೀಲ್ ಅವರ 2 ರಿಂದ 3 ಕೋಟಿ ರೂ.ಗಳ ಕಾಮಗಾರಿ ಪ್ರಕರಣವಾಗಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ 50 ಕೋಟಿ ರೂ. ಕ್ಕಿಂತ ಕಡಿಮೆ ಇರುವ ಟೆಂಡರ್ ಗಳೂ ಪರಿಶೀಲನೆಗೆ ಒಳಪಡಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಉನ್ನತ ಮಟ್ಟದ ಸಮಿತಿ ಕಾರ್ಯನಿರ್ವಹಣೆಯನ್ನು ಗಮನಿಸಿ ನಂತರ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸಮಿತಿಯನ್ನು ರಚಿಸಲಾಗುವುದು. ಅಭಿವೃದ್ಧಿ ಕೆಲಸಗಳ ವೇಗವೂ ಕುಂಠಿತವಾಗಬಾರದು ಎಂದರು.
ಜಾತಿಗಣತಿ ವರದಿ
ಜಾತಿಗಣತಿ ವರದಿ ಇನ್ನೂ ಬಹಿರಂಗವಾಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವರದಿ ಪೂರ್ಣ ಪ್ರಮಾಣದಲ್ಲಿ ಮಂಡನೆಯಾಗಿಲ್ಲ. ಈ ಬಗ್ಗೆ ಹಿಂದುಳಿದ ವರ್ಗದ ಆಯೋಗಕ್ಕೆ ವರದಿ ಮಂಡನೆಗೆ ಸೂಚನೆ ನೀಡಲಾಗಿದೆ. ದೀರ್ಘಕಾಲೀನ ಪರಿಣಾಮಗಳಿರುವಂತಹ ಇಂತಹ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಪುಟ ಪುನರ್ರಚನೆ
ಸಂಪುಟ ಪುನರಚನೆ ಅಥವಾ ವಿಸ್ತರಣೆ ಬಗೆಗಿನ ಪ್ರಶ್ನೆಗೆ ಉತ್ತರಿಸಿ, ಪರಮಾಧಿಕಾರದ ಪ್ರಶ್ನೆ ಅಲ್ಲ. ರಾಜಕಾರಣದಲ್ಲಿ ಸರಿಯಾದ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರು.
ಮೌಲ್ವಿಗಳ ಮಾಹಿತಿ ಬಹಿರಂಗಕ್ಕೆ ಆಗ್ರಹ
ರಾಜ್ಯದ ಮಸೀದಿಗಳಲ್ಲಿನ ಮೌಲ್ವಿಗಳ ಮಾಹಿತಿಗಳನ್ನುಬಹಿರಂಗಗೊಳಿಸಬೇಕು ಎಂದು ವಿರೋಧಪಕ್ಷಗಳು ಒತ್ತಾಯಿಸುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಗುಪ್ತ ದಳ ಹಾಗೂ ಪೊಲೀಸ್ ಇಲಾಖೆಯವರು ಹಲವಾರು ಕ್ರಮಗಳನ್ನು ಈ ಬಗ್ಗೆ ತೆಗೆದುಕೊಳ್ಳುತ್ತಿದ್ದಾರೆ. ಇವೆಲ್ಲ ಮಾಹಿತಿಯನ್ನು ಸರ್ಕಾರ ಬಹಿರಂಗಗೊಳಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

More News