ಅಜ್ಞಾತಸ್ಥಳದಿಂದ ವಿಡಿಯೋ ಸಂದೇಶ ಕಳುಹಿಸಿದ ವಾಸೀಂ ಪಠಾಣ್: ಹುಬ್ಬಳ್ಳಿ ಗಲಭೆಗೆ ನಾನು ಮಾಸ್ಟರ್ ಮೈಂಡ್ ಅಲ್ಲ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ನಡೆದ ಗಲಭೆ ಹಿನ್ನೆಲೆಯಲ್ಲಿ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದ್ದ ವಾಸೀಂ ಪಠಾಣ್ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಘಟನೆಯ ಮಾಸ್ಟರ್ ಮೈಂಡ್ ನಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಜ್ಞಾತಸ್ಥಳದಲ್ಲಿ ಮಾಡಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ ಅವರು, ನಾನು ಘಟನೆಯನ್ನು ನಿಯಂತ್ರಣ ಮಾಡಲು ಹೋಗಿದ್ದೆ ಎಂದು ತಿಳಿಸಿದ್ದಾರೆ. ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು, ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು, ಅವರ ಜತೆ ಮಾತನಾಡಲು ನನ್ನನ್ನು ಕರೆಸಿದ್ದರು, ನಾನು ಪೊಲೀಸರ ಜೊತೆಗೆ ಮಾತನಾಡಿದ್ದೆ ಹೇಳಿದ್ದಾರೆ.
ಪೊಲೀಸರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರೇ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ಹೇಳಿದರು, ನಾನು ವಾಹನದ ಮೇಲೆ ಹತ್ತಿದಾಗ ಅಲ್ಲಿ ಮೈಕ್ ಇರಲಿಲ್ಲ, ಹೀಗಾಗಿ ಕೈ ಸನ್ನೆ ಮಾಡುವ ಮೂಲಕ ಶಾಂತಿ ಕಾಪಾಡಲು ಹೇಳಿದ್ದೇನೆ ಎಂದರು.
ಆದರೆ ನಾನೇ ಅದರ ಪಿತೂರಿ ಮಾಡಿದ್ದೇನೆ ಎಂದು ಬಿಂಬಿತವಾಗುತ್ತಿದೆ, ‌ನಾನು ಘಟನೆ ಮಾಸ್ಟರ್ ಮೈಂಡ್ ಅಲ್ಲ, ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯ ವಾತಾವರಣ ಹದಗೆಡಿಸುವ ಉದ್ದೇಶ ನನ್ನದಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ವಿವರಿಸಿದರು.

ಪೊಲೀಸ್ ಇಲಾಖೆಯ ಬಗ್ಗೆ ನನಗೆ ಭರವಸೆ ಇದ್ದು, ಪೊಲೀಸರ ಮುಂದೆ ಶೀಘ್ರದಲ್ಲೇ ಹಾಜರಾಗಿ ನನ್ನ ಹೇಳಿಕೆ ನೀಡುತ್ತೇನೆ, ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ. ಜನರನ್ನು ನಿಯಂತ್ರಿಸುವ ಕಾರ್ಯ‌ ಮಾಡಿದೆ. ನಿಮ್ಮ ನಿಮ್ಮ ಮನೆಗೆ ವಾಪಸ್ ಹೋಗಲು ಹೇಳುತ್ತಿದ್ದೆ, ನನ್ನನ್ನು ಸಿಕ್ಕಿಸಿ ಹಾಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಪೊಲೀಸರ ಮುಂದೆ ಹಾಜರಾಗಬೇಕು ಅಂತ ಇದ್ದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ ಸುದ್ದಿಯಿಂದ ನಮ್ಮ ಮನೆಯವರು ಶರಣಾಗದಂತೆ ಹೇಳಿದರು. ಆದರೆ ಈಗ ನನ್ನ ಮೇಲೆ ಆರೋಪಗಳ ಸುರಿಮಳೆಯಾಗಿತ್ತಿದೆ. ನಾನು ತಪ್ಪು ಮಾಡಿದರೇ ಶಿಕ್ಷೆ ಕೊಡಲಿ. ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ವಾಸಿಂ ಪಠಾಣ್ ಹೇಳಿದ್ದಾರೆ.

More News