ವಿಜಯಪುರ : ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಂಟನೂರು ಗ್ರಾಮದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ರೈತರು ಜೋಡೆತ್ತು ಹಾಗೂ ಹಸು ಕಾಣಿಕೆಯನ್ನಾಗಿ ನೀಡಿದರು. ಜೋಡೆತ್ತನ್ನು ನೋಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಮುಂದಾದರು. ಅವುಗಳಿಗೆ ಪ್ರೀತಿಯಿಂದ ಕುಂಕುಮ ಇಡಲು ಮುಂದಾದರು. ಅವುಗಳ ಹಣೆಗೆ ಕುಂಕುಮವನ್ನು ಇಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರ ಗದ್ದಲ ಜೋರಾಗಿತ್ತು. ಈ ಶಬ್ದಕ್ಕೆ ಗಲಿಬಿಲಿ, ಗಾಬರಿಗೊಂಡ ಎತ್ತುಗಳು ಚಂಗನೇ ಹಾರಲು ಯತ್ನಿಸಿದವು. ಉದ್ದವಾದ ಕೋಡಿನಿಂದ ಮುಂದೆ ನಿಂತಿದ್ದವರನ್ನು ತಿವಿಯಲು ಮುನ್ನುಗ್ಗಿತ್ತು. ಇದರಿಂದ ಮುಂದೆಯೇ ನಿಂತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಲ್ಪದರಲ್ಲೇ ಪಾರಾದರು.

ಸ್ಥಳದಲ್ಲೇ ಇದ್ದ ಎ ಎಸ್ ಪಿ ರಾಮ್ ಅರಸಿದ್ದಿ ಅವರು ಎತ್ತಿನ ಕೋಡನ್ನು ತಕ್ಷಣವೇ ಹಿಡಿದು ಎತ್ತನ್ನು ಹತೋಟಿಗೆ ತೆಗೆದುಕೊಂಡರು.

ಇಲ್ಲದಿದ್ದರೆ ಅದು ಮುಖ್ಯಮಂತ್ರಿ ಅವರನ್ನು ತಿವಿಯುದರಲ್ಲಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅದೃಷ್ಟವಶಾತ್ ಪಾರಾದರು.

ಈ ಘಟನೆಯಿಂದ ನೆರೆದಿದ್ದ ಎಲ್ಲಾರೂ ಹಾಗೂ ಮುಖ್ಯಮಂತ್ರಿ ಅವರ ಸೆಕ್ಯುರಿಟಿ ಗಾಬರಿಗೊಂಡರು.

ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಘಟನೆ ಇಷ್ಟರಲ್ಲೇ ಮುಗಿದಿದ್ದರಿಂದ ಎಲ್ಲರೂ ನಿಟ್ಟಿಸಿರು ಬಿಟ್ಟರು.





