ಕಲಬುರಗಿ : ಪಿಎಸ್ ಐ ನೇಮಕಾತಿ ಹಗರಣದ ರೂವಾರಿ ಎನ್ನಲಾದ ತಲೆಮರೆಸಿಕೊಂಡಿರೋ ಬಿಜೆಪಿ ಮುಖಂಡರಾದ ದಿವ್ಯಾ ಹಾರಗರಿ ಬಂಧನಕ್ಕೆ ವಿಳಂಬ ಯಾಕೆ?, ದಿವ್ಯಾರವರಲ್ಲಿ ಅಂತಹ ದಿವ್ಯ ಶಕ್ತಿ ಏನಿದೆ? ಎಂದು ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸಚಿವ ಪ್ರಭು ಚೌವ್ಹಾಣ್ ಸೇರಿದಂತೆ ಹಲವರು ಸಿಐಡಿಗೆ ಪತ್ರ ಬರೆದಿದ್ದಾರೆ, ಹಾಗಾದ್ರೆ ಪತ್ರ ಬರೆದವರನೆಲ್ಲ ಸಹ ಸಿಐಡಿ ವಿಚಾರಣೆಗೆ ಕರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿ ಸರ್ಕಾರದ ಪ್ರತಿಯೊಬ್ಬರು ಹಗರಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ, ದೊಡ್ಡ ದೊಡ್ಡವರಿಗೆ ಹಗರಣದಲ್ಲಿ ಹಣ ಹೋಗಿದೆ ಎಂದು ಆರೋಪಿಸಿದ ಅವರು, ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆಗೆ ತನಿಖೆಗೆ ಹಾಜರಾಗಲು ಭಯ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಪ್ರಿಯಾಂಕ್ ತನಿಖೆಗೆ ಹಾಜರಾದರೆ ಲಾಕ್ ಆಗುತ್ತಾರೆ ಎಂಬುದು ನಗೆಪಾಟೀಲಿನ ಹೇಳಿಕೆ, ನಾನು ಲಾಕ್ ಆಗುವುದಿಲ್ಲ. ನಾನು ಯಾವಾಗಲೂ ಅನ್‌ಲಾಕ್ ಆಗಿಯೇ ಇರ್ತಿನಿ, ಪಾರದರ್ಶಕವಾಗಿ ನಾನು ತನಿಖೆಗೆ ಆಗ್ರಹಿಸಿದ್ದೇನೆ ಎಂದರು.

ದಿವ್ಯಾ ಎಲ್ಲಿಯೂ ಹೋಗಿಲ್ಲ.. ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೆ ಇದ್ದಾರೆ ಎಂದು ಆರೋಪಿಸಿದ ಅವರು, ರಕ್ಷಣೆಗಾಗಿ ಹಲವು ಶಾಸಕರು-ಸಚಿವರ ಮೊರೆ ಹೋಗುತ್ತಿದ್ದಾರೆ,
ಎರಡನೇ ಬಾರಿ ನೋಟಿಸ್
ಸಿಐಡಿ ಅಧಿಕಾರಿಗಳು ಇಂದು ನನಗೆ ಮತ್ತೆ ಎರಡನೇ ಬಾರಿ ನೋಟಿಸ್ ನೀಡಿದ್ದಾರೆ, ಬೆಂಗಳೂರಿನ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಬಂದು ನೋಟಿಸ್ ನೀಡಿದ್ದಾರೆ, ನಾನು ಕಲಬುರಗಿಗೆ ಫ್ಲೈಟ್‌ನಲ್ಲಿ ಆಗಮಿಸುತ್ತಿರುವಾಗ ಸಿಐಡಿಯಿಂದ ಫೋನ್ ಬಂದಿದೆ, ಆದರೆ ನಾನು ಸಿಐಡಿ ಅಧಿಕಾರಿಗಳ ಫೋನ್ ರಿಸೀವ್ ಮಾಡಲಿಲ್ಲ, ನಂತರ ನಮ್ಮ ಸಿಬ್ಬಂದಿಗಳಿಂದ ಮಾಹಿತಿ ಬಂದಿದೆ ಎಂದು ತಿಳಿಸಿದರು. ಸಿಐಡಿ ಪೊಲೀಸರು ನೋಟಿಸ್ ನೀಡಿದ ಕೂಡಲೇ ತನಿಖೆಗೆ ಹಾಜರಾಗಬೇಕೆಂಬ ನಿಯಮವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.




