ಬೆಳಗಾವಿ: ಕುಡಿಯುವ ನೀರು ಬಿಡುವಂತೆ ಒತ್ತಾಯಿಸಿ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ರೈತರು ಕೂಠಡಿಯೊಂದರಲ್ಲಿ ಕೂಡಿಹಾಕಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರೈತರು ಅಧಿಕಾರಿಗಳನ್ನು ಕೊಠಡಿಯೊಳಗೆ ಬಂಧಿಸಿ, ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿದರು. ಜನರು ಹಾಗೂ ಜಾನುವಾರುಗಳಿಗಾಗಿ ಕುಡಿಯುವ ನೀರು ಬಿಡುವಂತೆ ರೈತರು ಆಗ್ರಹಪಡಿಸಿದರು.
ನೀರಾವರಿ ಇಲಾಖೆ ಇಂಜಿನಿಯರ್‌ಗಳನ್ನ ಕೂಡಿಹಾಕಿದ ಗೋಕಾಕ-ಮೂಡಲಗಿ ತಾಲೂಕಿನ ರೈತರು, ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡಗಡೆ ಮಾಡುವಂತೆ ಒತ್ತಾಯಿಸಿದರು.
ಆದರೆ,ಘಟಪ್ರಭಾ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ ನೀರು ಬಿಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಗೋಕಾಕ, ಮೂಡಲಗಿ ತಾಲೂಕು ವ್ಯಾಪ್ತಿಯಲ್ಲಿನ ಕುಲಗೋಡ, ಕೌಜಲಗಿ, ತಿಮ್ಮಾಪೂರ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ನೀರಿನ ಸಮಸ್ಯೆ ತಲೆದೋರಿತ್ತು.

ಘಟಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ 2ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆಗ್ರಹಪಡಿಸಿದ ರೈತರು, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕೂಡಲೇ ನೀರು ಬಿಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಮಾರ್ಕೆಟ್ ಎಸಿಪಿ ಸದಾಶಿವ ಕಟ್ಟಿಮನಿ ಭೇಟಿ ಮಾಡಿ ರೈತರ ಮನವೊಲಿಕೆ ನಂತರ ಕೊಠಡಿಯಲ್ಲಿ ಬಂಧಿಸಿದ್ದ ಅಧಿಕಾರಿಗಳನ್ನು ಬಿಡುಗಡೆ ಮಾಡಿದರು.




