COLLECTIVE LEADERSHIP: ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ: ನಾನೇ ಪಕ್ಷಕ್ಕೆ ಅಧಿಕಾರ ತರುತ್ತೇನೆ ಎನ್ನುವುದು ಸುಳ್ಳು: ಯತ್ನಾಳ್

ವಿಜಯಪುರ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ಸಹೋದರನ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಸಮಗ್ರ ತನಿಖೆಯಾಗಬೇಕು, ಯಾರೇ ಇದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವೇ ಪ್ರಕರಣವನ್ನು ತನಿಖೆಗೆ ಒಳಪಡಿಸಿದೆ, ಈ ಹಿಂದೆನೂ ಕೂಡ ಇಂಥಹ ಡೀಲ್ ನಡೆದಿವೆ. ಇದೇನು ಮೊದಲೇನಲ್ಲ ಎಂದು ಯತ್ನಾಳ್ ತಿಳಿಸಿದರು.
ಸರ್ಕಾರ ಪ್ರಕರಣ ಸಿಐಡಿಗೆ ಕೊಟ್ಟಿದೆ, ಸಿಐಡಿ ಒಳ್ಳೆಯ ರೀತಿಯಿಂದ ತನಿಖೆ ಮಾಡುತ್ತಿದೆ, ಯಾವುದೇ ಮುಲಾಜಿಲ್ಲದೆ ತನಿಖೆ ಮಾಡುತ್ತಿದೆ, ಅಶ್ವತ್ಥ ನಾರಾಯಣರ ಸಹೋದರನ ಪಾತ್ರ ಎಷ್ಟಿದೆ ಅನ್ನೋದನ್ನ ತನಿಖೆ ಮಾಡುತ್ತಾರೆ ಎಂದು ತಿಳಿಸಿದ ಅವರು, ತಪ್ಪಿದ್ದರೇ ಅರೆಸ್ಟ್ ಮಾಡುತ್ತಾರೆ, ಯಾರನ್ನು ಬಿಡೋದಿಲ್ಲ ಎಂದು ಸಿಎಂ ಹೇಳಿದ್ದಾರೆ, ಸುಮ್ಮನೆ ಸಂಶಯ ಪಡೋದು ಬೇಡ ಎಂದು ತಿಳಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ
ರಾಜ್ಯ ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವ ಇದೆ, ಯಾರೇ ಒಬ್ಬರ ನಾಯಕತ್ವ ಇಲ್ಲ. ಯಡಿಯೂರಪ್ಪ ಆಗಲಿ, ಕಟೀಲ್ ಆಗಲಿ, ಜಗದೀಶ ಶಟ್ಟರ್ ಆಗಲಿ, ಬಸನಗೌಡ ಪಾಟೀಲ್ ಆಗಲಿ. ನಾನೇ ಪಕ್ಷ ಅಧಿಕಾರಕ್ಕೆ ತರ್ತೀನಿ, ನೀನೆ ತರ್ತೀನಿ ಅನ್ನೋದು ಸುಳ್ಳು, ಎಲ್ಲರು ಸೇರಿಯೇ 150 ಸೀಟ್ ತರಬೇಕಿದೆ ಎಂದು ತಿಳಿಸಿದರು.

ನನ್ನಿಂದಲೇ, ನನ್ನಿಂದ ಸೂರ್ಯೋದಯ ಆಗುತ್ತೆ ಅನ್ನೋದು ತಲೆಯಿಂದ ತೆಗೆಯಬೇಕು ಎಂದು ಹೇಳಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತೆ, ಸಾಮೂಹಿಕ ನಾಯಕತ್ವದಲ್ಲಿ ಯಡಿಯೂರಪ್ಪ ಕೂಡ ಇರ್ತಾರೆ ಎಂದು ಯತ್ನಾಳ್ ತಿಳಿಸಿದರು.

More News