ಬೆಂಗಳೂರು : ಕಾಂಗ್ರೆಸ್ ಪಕ್ಷ ಮುಳುಗಿ ಹೋಗಿದ ಹಡಗು, ಶೀಘ್ರದಲ್ಲೇ ಸಿದ್ದರಾಮಯ್ಯನವರನ್ನೇ ಸಸ್ಪೆಂಡ್ ಮಾಡಲಿದ್ದಾರೆ, 2023ಕ್ಕೆ ಪಾರ್ಟಿಯಿಂದಲೇ ಸಸ್ಪೆಂಡ್ ಮಾಡಿಸುತ್ತಾರೆ ಎಂದು ಸಚಿವ ಮುನಿರತ್ನ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಅಕ್ರಮ ಹಗರಣದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿರುವ ಸಚಿವರು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ನಿಂದ ಕೆಲವರು ಬಿಡಿಸುತ್ತಾರೆ ಎಂದು ಹೇಳಿದರು.
ಈ ಹಿಂದೆ ರಾಮಕೃಷ್ಣ ಹೆಗಡೆ ಅವರಿಗಾದ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಲಿದೆ ಎಂದು ಹೇಳಿದ ಅವರು 1994 ರಲ್ಲಿ ಆಗಿದ್ದು 2023ರಲ್ಲಿ ನಡೆಯುತ್ತದೆ ಎಂದು ಸಚಿವ ಮುನಿರತ್ನ ಭವಿಷ್ಯ ನುಡಿದರು.
ಜನವರಿ 3ರಂದೇ ಮುಹೂರ್ತ ಇಟ್ಟಿದ್ದರು
ಜನವರಿ 3ರಂದೇ ರಾಮನಗರದಿಂದಲೇ ಅಶ್ವಥ್ ನಾರಾಯಣ್ ಗೆ ಮುಹೂರ್ತ ಇಟ್ಟಿದ್ದರು ಎಂದು ಹೇಳಿದ ಮುನಿರತ್ನ, ಅಶ್ವಥ್ ನಾರಾಯಣ್ ಎದೆ ಉಬ್ಬಿಸಿ ಮಾತನಾಡಿದ್ದರು ಇದೇ ಇದಕ್ಕೆ ಕಾರಣ ಎಂದು ತಿಳಿಸಿದರು. ಆಗಲೇ ಇವರಿಗೆ ಏನಾದ್ರು ಮಾಡ್ತಾರೆ ಅಂದುಕೊಂಡಿದ್ವಿ ಆದರೆ ಆಗಲಿಲ್ಲ, ಅದರ ಎಫೆಕ್ಟ್ ಈಗ ಆಗಿದೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ಜನರಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿದೆ, ರಾಜಕೀಯ ದ್ವೇಷಕ್ಕಾಗಿ ಕುಟುಂಬಸ್ಥರನ್ನ ಎಳೆದುತರುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪ್ರಿಯಾಂಕ್ ಖರ್ಗೆ ಗೆ ನೊಟೀಸ್ ಕೊಟ್ಟಿದ್ದಾರೆ, ಅವರು ಹೇಳಿಕೆ ಕೊಡಬೇಕು ಎಂದು ಆಗ್ರಹಿಸಿದರು.

ಪ್ರಭುಚವ್ಹಾಣ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರಿಗೂ ನೊಟೀಸ್ ಕೊಡುತ್ತಾರೆ ಎಂದು ಹೇಳಿದರು. ೪೦% ಬಗ್ಗೆ ದಾಖಲೆ ಇಲ್ಲದೆ ಹೇಗೆ ಮಾತನಾಡುತ್ತಾರೆ, ದಾಖಲೆ ಕೊಟ್ಟು ಆರೋಪ ಮಾಡಿ ಎಂದು ಮುನಿರತ್ನ ಸಲಹೆ ನೀಡಿದರು.
ಪ್ರಧಾನಿ ೧೦% ಕಮೀಷನ್ ಆರೋಪ ಮಾಡಿದ್ರು, ಆಗ ದಾಖಲೆ ನೀಡಿದ್ರಾ ಅನ್ನೋ ಪ್ರಶ್ನೆಗೆ ತಬ್ಬಿಬ್ಬಾದ ಮುನಿರತ್ನ, ಆಗ ಕಾಂಗ್ರೆಸ್ ನವರು ದಾಖಲೆ ಕೇಳಬೇಕಿತ್ತು, ಆಗ ಅವರು ಯಾಕೆ ಕೇಳಲಿಲ್ಲ, ಈಗ ನಾವು ಕೇಳ್ತಿದ್ದೇವೆ ದಾಖಲೆ ಕೊಡಿ ಎಂದು ಸಮಜಾಯಿಸಿ ನೀಡಿದರು.




