ಬೆಳಗಾವಿ: ನಮ್ಮ ಹೋರಾಟದಿಂದ 3ಜನ ಪಂಚಮಸಾಲಿ ಸಚಿವರಾಗಿದ್ದಾರೆ. ಮೊದಲು ಬಿಎಸ್‌ವೈ ಒಬ್ಬರನ್ನ ಮಂತ್ರಿ ಮಾಡಲು ಒದ್ದಾಡುತ್ತಿದ್ದರು. ಬಸನಗೌಡನ ಮಾಡಬಾರದು ಅಂತಾ ಸಿ.ಸಿ.ಪಾಟೀಲ್‌ನ ಮಂತ್ರಿ ಮಾಡಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದ್ ಕ್ಯಾಶ್ ಕ್ಯಾಂಡಿಡೇಟ್ ಐತಿ ಅದನ್ನ ಮಾಡಲೇಬೇಕಾಗಿತ್ತು ಎಂದು ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಕ್ಯಾಶ್ ಕ್ಯಾಂಡಿಡೇಟ್ ಎಂದು ಯತ್ನಾಳ್ ಆರೋಪಿಸಿದರು.
ಇನ್ನೊಬ್ಬ ಶಂಕರ ಪಾಟೀಲ್ ಮುನೇನಕೊಪ್ಪನ ಮಾಡಿದ್ರು. ಅರವಿಂದ ಬೆಲ್ಲದ್ ನ ಮಂತ್ರಿ ಮಾಡಬಾರದು ಅಂತಾ ಜಗದೀಶ್ ಶೆಟ್ಟರ್ ಮುನೇನಕೊಪ್ಪನ ಮಾಡಿದ್ರು. ಸಿ.ಸಿ.ಪಾಟೀಲ್ ಪಾಪ ಬೊಮ್ಮಾಯಿ ದೋಸ್ತಿ ಅದಕ್ಕೆ ಸಚಿವರಾಗಿದ್ದರು ಎಂದು ಹೇಳಿದರು.
ನಾ ರೊಕ್ಕಾ ಕೊಡವನಲ್ಲ ಕಿಸಿಯವನಲ್ಲ. 50 ಕೋಟಿ ನೂರು ಕೋಟಿ ಕೊಡ್ತಾನೆ, ಅವು ಬಾಯಿ ತಕ್ಕೊಂಡು ಕೂತಿರ್ತಾವ. ಹಣ ತಗೊಂಡು ಮಂತ್ರಿ ಮಾಡ್ತಾರೆ. ನಾನು ಎಂಬುವನು ಕರ್ನಾಟಕ ಲೂಟಿ ಮಾಡೋಕೆ ಭಗವಂತನ ಸಾಕ್ಷಿಯಾಗಿವೆ ಎಂದು ಯತ್ನಾಳ್ ತಿಳಿಸಿದರು.
ನಿಮ್ಮನ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಎಂದು ಕೇಳಿದ್ರು
ದೆಹಲಿಯಿಂದ ಬಂದ ಕೆಲವರು ಎರಡೂವರೆ ಸಾವಿರ ಕೋಟಿ ನೀಡಿ ಸಿಎಂ ಮಾಡ್ತೀವಿ ಅಂದಿದ್ದರು ಎಂದು ಗಂಭೀರ ಆರೋಪ ಮಾಡಿದರು. ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿ ಕರೆದುಕೊಂಡು ಹೋಗ್ತೀವಿ. ಸೋನಿಯಾ ಗಾಂಧಿ ಭೇಟಿ ಮಾಡಿಸುತ್ತೇವೆ, ಜೆ.ಪಿ.ನಡ್ಡಾರನ್ನ ಭೇಟಿ ಮಾಡಿಸುತ್ತೇವೆ ಅಂತಾರೆ ಎಂದು ಅನೇಕ ಸಂಗತಿಗಳನ್ನು ಬಯಲು ಮಾಡಿದರು.
ದೆಹಲಿಯಿಂದ ಒಂದಿಷ್ಟು ಜನ ನನ್ನ ಬಳಿಯೂ ಬಂದಿದ್ದರು. ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ರೆಡಿ ಮಾಡಿ ಇಡಿ. ನಾ ಅಂದೆ ಮಕ್ಕಳಾ, 2500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ ಅಂದೆ. ಆ ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು. ಏನು ಕೋಣೆಯಲ್ಲಿ ಇಡೋದೋ? ಗೋದಾಮಿನಲ್ಲಿ ಇಡೋದೋ? ಎಂದು ಪ್ರಶ್ನಿಸಿದ್ದೇ ಎಂದು ತಿಳಿಸಿದರು.
ನಾನು ವಾಜಪೇಯಿಯವರ ಕೈಯಲ್ಲಿ ಕೆಲಸ ಮಾಡಿದವನು. ಅಡ್ವಾಣಿ, ರಾಜನಾಥಸಿಂಗ್, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತಾ ಹೆಸರು ಹೇಳಿ ಕರಿತಿದ್ರು. ಅಂತಾ ವ್ಯಕ್ತಿಗೆ ಹೇಳ್ತಾರೆ ಎರಡೂಸಾವಿರ ಕೋಟಿ ಸಜ್ಜ ಮಾಡಿ ಸಿಎಂ ಮಾಡ್ತೀವಿ ಅಂತಾರೆ. ನಡ್ಡಾರ ಮನೆಗೆ ಕರೆದುಕೊಂಡು ಹೋಗ್ತೀವಿ, ಅಮಿತ್ ಶಾ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತಾ ಹಿಂಗಿಲ್ಲಾ ನಡಿತಿದೆ ಎಂದು ಬಸನಗೌಡ ಪಾಟೀಲ್ ಮತ್ತೊಂದು ಬಾಂಬ್ ಹಾಕಿದ್ದಾರೆ.
ಯಡಿಯೂರಪ್ಪ ವಿರುದ್ಧ ಯತ್ನಾಳ್ ಏಕವಚನದಲ್ಲೇ ವಾಗ್ದಾಳಿ
ಯಡಿಯೂರಪ್ಪ ಸಿಎಂ ಆಗಿರೋವರೆಗೂ ನಿಮ್ಮ ಛೇಂಬರ್‌ಗೆ ಬರಲ್ಲ ಎಂದಿದ್ದೆ. ಲಿಂಗಾಯತರಲ್ಲಿ 72 ಪರ್ಸೆಂಟ್ ಪಂಚಮಸಾಲಿ ಸಮಾಜದವರಿದ್ದಾರೆ. ಇಲ್ಲಿಯವರೆಗೂ ರಾಜ್ಯದ ಸಿಎಂ ಆದವರು ಎರಡು ಪರ್ಸೆಂಟ್. ಸುಳ್ಳು ಹೇಳೋದು ಮೋಸ ಮಾಡೋದು ರಾಜಕಾರಣ ಆಗಿದೆ ಎಂದು ಟೀಕಿಸಿದರು.

ನಾ ನಾಟಕ ಮಾಡಿದ್ರೆ ಈ ಹಿಂದೆಯೇ ಸಿಎಂ ಆಗಿರ್ತಿದಿದ್ದೆ. ಪಾಪ ಯಡಿಯೂರಪ್ಪರಿಗೂ ಇತ್ತೀಚೆಗೆ ಪುತ್ರ ವ್ಯಾಮೋಹ ಬಂದುಬಿಟ್ಟಿತು. ಯತ್ನಾಳ್ ಮಂತ್ರಿ ಮಾಡಿದ್ರೆ ನನ್ನ ಧೀಮಂತ ಮಗ ವಿಜಯೇಂದ್ರ ಗತಿ ಏನು? ಅದಕ್ಕೆ ಮಂತ್ರಿ ಮಾಡದೇ ತುಳಿಯೋದು, ನಾನೇ ಲೆಟರ್ ಕೊಟ್ಟರೂ ಸೈಡ್ ಇಡ್ತಿದ್ರು. ಆಗ ನಾನು ನೀ ಸಿಎಂ ಆಗಿರೋವರೆಗೂ ನಿಮ್ಮ ಛೇಂಬರ್‌ಗೆ ಬರಲ್ಲ ಎಂದು ಬಿಎಸ್‌ವೈಗೆ ಹೇಳಿದ್ದೆ. ಕಾವೇರಿಗೂ ಬರಲ್ಲ, ಕೃಷ್ಣಾಗೂ ಬರಲ್ಲ ಎಂದಿದ್ದೆ. ನಿನ್ನ ಸಿಎಂ ಸ್ಥಾನದಿಂದ ಇಳಿಸಿಯೇ ಈ ಛೇಂಬರ್‌ಗೆ ಬರ್ತೀನಿ ಎಂದಿದ್ದೆ. ಮುಂದೆ ಬೊಮ್ಮಾಯಿ ಫೋನ್ ಮಾಡಿ ಕರೆಸಿದಾಗ ಹೋಗಿದ್ದೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮಿಂದ ನಾನು ಇವತ್ತು ಸಿಎಂ ಆದೆ ಅಂತಾ ಬೊಮ್ಮಾಯಿ ಹೇಳಿದ್ರು. ಸಿಎಂ, ಮಂತ್ರಿ ಆಸೆ ಇಲ್ಲ, ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಕೊಡಿ ಎಂದೆ. ನಿಮ್ಮನ್ನು ಮಂತ್ರಿ ಮಾಡ್ತೀನಿ ಅಂತಾ ಬೊಮ್ಮಾಯಿ ಹೇಳಿದ್ರು, ಆ ಲಾಲಿಪಾಪ್ ಆಸೆ ಹಚ್ಚಬೇಡಿ ಎಂದೆ. ಹಿಂದಿನವರೂ ಮಾಡಿದ ಹಾಗೇ ನಾಟಕ ಮಾಡೋ ಮಗನಲ್ಲ ಅಂದೆ. ಪಂಚಮಸಾಲಿ ಮೀಸಲಾತಿ ಕೊಡಿ ನಿಮ್ಮ ಮಂತ್ರಿ ಅಲ್ಲೇ ಇಟ್ಟುಕೊಳ್ಳಿ ಅಂದೆ ಎಂದು ಯತ್ನಾಳ್ ಹೇಳಿದ್ದೇನೆ ಎಂದರು.
ರಮೇಶ್ ಜಾರಕಿಹೊಳಿ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್
ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಬಿಜೆಪಿ ಸರ್ಕಾರ ಬರಲು ಅವರದ್ದು ಕಾಂಟ್ರಿಬ್ಯುಷನ್ ಇದೆ ಎಂದು ಹೇಳಿದರು.

ಬಿಜೆಪಿಯಲ್ಲಿನ ಮಹಾನಾಯಕನೂ ಅಡ್ಜಸ್ಟ್‌ಮೆಂಟ್ ಮಾಡಿದ್ದಾರೆ, ಡಿಕೆಶಿ, ಕುಮಾರಸ್ವಾಮಿ ಎಲ್ಲರೂ ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು, ಇಲ್ಲಿ ಅಲ್ಲ ವಿಧಾನಸೌಧದಲ್ಲಿ ಹೇಳಿದ್ದೇನೆ ಎಂದರು. ಮುಂದೆ ಕುಳಿತ ಸಾಲಿನವರು ಎಲ್ಲಾ ಅಡ್ಜಸ್ಟ್‌ಮೆಂಟ್ ಇದೀರಿ ಅಂತಾ, ರಾತ್ರಿ ನೀವೆಲ್ಲ ಮಾತನಾಡುತ್ತೀರಿ, ಯಡಿಯೂರಪ್ಪ, ಸಿದ್ದರಾಮಯ್ಯ, ಡಿಕೆಶಿ, ಹೆಚ್.ಡಿ. ಕುಮಾರಸ್ವಾಮಿ ಎಂದು ಹೇಳಿದ್ದೇ ಎಂದರು.
ಶಿಕಾರಿಪುರ ಬಿಟ್ರೆ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಗೆ ಹೆಚ್ಚಿನ ಅಭಿವೃದ್ಧಿ ಹಣ ಕೊಟ್ಟಿದ್ದಾರೆ, ಅದನ್ನ ಬಿಟ್ರೆ ಡಿಕೆಶಿ ಕ್ಷೇತ್ರಕ್ಕೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊಟ್ಟಿದ್ದಾರೆ ಎಂದು ತಿಳಿಸಿದ ಅವರು, ನಾವೆಲ್ಲ ಬಿಜೆಪಿ ಎಂಎಲ್‌ಎಗಳು ಕೈ ಎತ್ತಲು ಬಂದಿಲ್ಲ, ಹೀಗೆ ಹೇಳಿದ ಮೇಲೆ ಬೊಮ್ಮಾಯಿ ನನಗೂ 500 ಕೋಟಿ ರೂಪಾಯಿ ಕೊಟ್ಟಿದ್ದಾರೆ ಎಂದು ವಿವರಿಸಿದರು.




