ಹುಬ್ಬಳ್ಳಿ : ಬಿಜೆಪಿಯಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ಹಣ ನೀಡಬೇಕು ಎಂದು ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವರು, ಹಾಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಜನತೆಗೆ ತಿಳಿಸಿರುವುದು ಸೂಕ್ತ ರೀತಿಯ ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರ ಈ ಹೇಳಿಕೆ ಇಡೀ ದೇಶವೇ ತಲ್ಲಣಗೊಳ್ಳುವಂತೆ ಮಾಡಿದೆ, ಇನ್ನು ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ಹಣ ನೀಡಬೇಕು ಎಂದು ಕೇಳಿರುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಎಸಿಬಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳಿಗೆ ಅವರ ಪಕ್ಷದ ಗೌರವ ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ಅವರಿಗೆ ರಾಜಕೀಯ ಬದ್ಧತೆ ಇದ್ದರೆ ರಾಜ್ಯದಲ್ಲಿ ನಡೆದಿರುವ ಅನೇಕ ಹಗರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಈ ಸರ್ಕಾರ ಹುಟ್ಟಿದ್ದೇ ಶಾಸಕರನ್ನು ಖರೀದಿ ಮಾಡಿ. ಶಾಸಕ ಶ್ರೀನಿವಾಸಗೌಡರು ವಿಧಾನಸಭೆಯಲ್ಲಿ ಸಚಿವ ಅಶ್ವಥ್ ನಾರಾಯಣ ಹಾಗೂ ಯೋಗೀಶ್ವರ್ ಅವರು 30 ಕೋಟಿ ಹಣ ನೀಡುವುದಾಗಿ ಹೇಳಿ 5 ಕೋಟಿ ಮುಂಗಡ ಕೊಟ್ಟು ಹೋಗಿದ್ದರು ಎಂದು ಹೇಳಿಕೆ ನೀಡಿದ್ದರು, ಬಿ.ಸಿ. ಪಾಟೀಲ್ ಮತ್ತಿತರ ನಾಯಕರುಗಳು ಆಮಿಷ ಒಡ್ಡಿರುವ ಸಂಭಾಷಣೆ ಗಮನಿಸಿದ್ದೇವೆ. ಹೆಬ್ಬಾರ್, ರಹೀಂ ಖಾನ್ ಅವರು ಈ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದರು ಎಂದು ಆರೋಪಿಸಿದರು.
ಆದರೆ ಈಗ ಕೋವಿಡ್ ಅಕ್ರಮ, ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್, ವಿವಿಧ ಇಲಾಖೆಗಳ ನೇಮಕಾತಿ ಅಕ್ರಮ, ಒಂದೊಂದು ಹುದ್ದೆಗೆ ಒಂದೊಂದು ರೇಟ್ ನಿಗದಿ, ಪೊಲೀಸ್ ಇಲಾಖೆಯಲ್ಲಿ ಎಸ್ಐ, ಎಸ್ಪಿ, ಡಿವೈಎಸ್ಪಿ ಸೇರಿದಂತೆ ವಿವಿಧ ಹುದ್ದೆಗಳಿಗೆ ವಿವಿಧ ದರ ನಿಗದಿ ಆಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿದೆ.
ಹೀಗೆ ಪ್ರತಿ ವಿಚಾರದಲ್ಲೂ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿರುವಾಗ ಸರ್ಕಾರ ತನಿಖೆ ನಡೆಸದೆ ಸುಮ್ಮನೆ ಕೂತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತನಿಖಾ ಸಂಸ್ಥೆಗಳು ಸುಮ್ಮನೆ ಕೂತಿರುವುದು ಏಕೆ? ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಹೆಸರಲ್ಲಿ ಸಿಬಿಐಗೆ ತನಿಖೆಗೆ ಅವಕಾಶ ನೀಡಲು ಬರುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಅವರು ಸಲಹೆ ನೀಡಿದರೂ ಯಡಿಯೂರಪ್ಪನವರು ಸಿಬಿಐ ವಿಚಾರಣೆಗೆ ಅನುಮತಿ ಕೊಟ್ಟಿದ್ದರು ಎಂದು ಆರೋಪಿಸಿದರು.
ಎಲ್ಲ ಅಕ್ರಮಗಳನ್ನು ಮುಖ್ಯಮಂತ್ರಿಗಳು ರಕ್ಷಣೆ ಮಾಡುತ್ತಿದ್ದಾರೋ ಅಥವಾ ಅವರ ಪಕ್ಷದವರು ರಕ್ಷಣೆ ಮಾಡುತ್ತಿದ್ದಾರೋ? ಆ ಮೂಲಕ ಸಂವಿಧಾನವನ್ನು ಸುಡಲು ನಿರ್ಧರಿಸಿದ್ದಾರೋ? ಎಲ್ಲಾ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು.
ಯತ್ನಾಳ್ ಅವರ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಹಾಗಾದರೆ ಈ ಅಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ, ‘ಖಂಡಿತವಾಗಿಯೂ ಸರ್ಕಾರ ಎಲ್ಲಾ ಅಕ್ರಮಗಳನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು, ಶಾಸಕರು ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಈ ಅಕ್ರಮಗಳಿಗೆ ಯಾರು ಬೆಂಬಲವಾಗಿ ನಿಂತರು, ಯಾರು ಅಕ್ರಮವಾಗಿ ಕೆಲಸ ಕೊಡಿಸಲು ಮುಂದಾದರು ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ನನ್ನ ಕಿವಿಗೆ ಬೀಳುತ್ತಿದೆ’ ಎಂದರು.




