ಬೆಂಗಳೂರು: ನೀರವ್ ಮೋದಿ ವಿಜಯ್ ಮಲ್ಯ ಮೆಕುಲ್ ಚೋಕ್ಸಿ ಅವರು ಯಾವ ರೀತಿ ಹಗರಣ ಮಾಡಿ ದೇಶವನ್ನು ತೊರೆದು ಹೋಗಿದ್ದಾರೋ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮಹಾ ವಂಚನೆಯ ಹಗರಣವನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಕೆಲವು ದಾಖಲಾತಿಗಳನ್ನು ಬಿಡುಗಡೆ ಮಾಡಿದ ಅವರು, ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ಸೌಭಾಗ್ಯಲಕ್ಷಿ ಶುಗರ್ ಲಿಮಿಟೆಡ್ ಎಂಬ ಸಕ್ಕರೆ ಕಾರ್ಖಾನೆ ಇದ್ದು, ಇದರ ಮಾಲೀಕರು ರಮೇಶ್ ಜಾರಕಿಹೊಳಿ, ಇದರ ಮೇಲೆ ಕೋಟ್ಯಂತರ ರೂಪಾಯಿ ಸಾಲ ಮಾಡಿ ಮರುಪಾವತಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಅಪೆಕ್ಸ್ ಬ್ಯಾಂಕುಗಳ ಅಡಿಯಲ್ಲಿ ಬರುವ ಸುಮಾರು 15 ಬ್ಯಾಂಕುಗಳಿಂದ 366 ಕೋಟಿ ಸಾಲ ಮಾಡಿದ್ದು, ಯೂನಿಯನ್ ಬ್ಯಾಂಕಿನಿಂದ 20 ಕೋಟಿ, ತೆರಿಗೆ ಇಲಾಖೆಯಿಂದ 200 ಕೋಟಿ ಬಾಕಿ ಉಳಿಸಿಕೊಂಡಿದ್ದು, ಹರಿಯಂತ್ ಸಹಕಾರಿ ಬ್ಯಾಂಕ್ ನಿಂದ 20 ಕೋಟಿ, ಒಟ್ಟು 660 ಕೋಟಿ ಸಾಲ ಮಾಡಿದ್ದಾರೆ ಎಂದು ಲಕ್ಷ್ಮಣ್ ತಿಳಿಸಿದರು.
2017ರಲ್ಲಿ ಅಪೆಕ್ಸ್ ಬ್ಯಾಂಕಿನವರು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯನ್ನು NPA ಎಂದು ಘೋಷಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 11 ಲಕ್ಷ ಕೋಟಿಯಷ್ಟು ಸಾಲವನ್ನು NPA ಎಂದು ಘೋಷಣೆ ಮಾಡಿ ಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮೊತ್ತದ NPA ಆಗಿರುವ ಕಂಪನಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಎಂದು ಹೇಳಿದರು.
ನಂತರ ಬ್ಯಾಂಕಿನವರು ನಿಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ನೊಟೀಸ್ ಜಾರಿಗೊಳಿಸುತ್ತಾರೆ. ಆಗ ಅವರು 2019ರವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಂತರ ಆ ನೊಟೀಸ್ ಅನ್ನು ಧಾರವಾಡ ಹೈಕೋರ್ಟ್ ನಲ್ಲಿರುವ ದ್ವಿಸದಸ್ಯಪೀಠಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ನಂತರ ನ್ಯಾಯಾಲಯ 28-11-2019ರಲ್ಲಿ ಮಧ್ಯಂತರ ತೀರ್ಪು ನೀಡಿ, ನೀವು ಆರು ವಾರಗಳ ಒಳಗಾಗಿ 366 ಕೋಟಿ ಸಾಲದಲ್ಲಿ ಅರ್ಧದಷ್ಟು ಹಣವನ್ನು ಪಾವತಿಸಿ ನಂತರ ನ್ಯಾಯಾಲಯಕ್ಕೆ ಬನ್ನಿ ಎಂದು ಸೂಚಿಸುತ್ತದೆ.
ಆ ಆದೇಶಕ್ಕೆ ರಮೇಶ್ ಜಾರಕಿಹೊಳಿ ಅವರು ನಯಾಪೈಸೆ ಗೌರವ ನೀಡಲಿಲ್ಲ. ನಂತರ 2-12-2021ರಲ್ಲಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಒಂದು ನೊಟೀಸ್ ಅನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಕಳೆದ ಐದು ತಿಂಗಳಿಂದ ಈ ಪತ್ರದ ಬಗ್ಗೆ ತಲೆ ಕೆಡೆಸಿಕೊಳ್ಳದೆ ನಿದ್ದೆ ಮಾಡುತ್ತಿದ್ದಾರೆ. ಪತ್ರದ ಸಾರಾಂಶ ಏನೆಂದರೆ, ‘366 ಕೋಟಿ ಸಾಲ ವಸೂಲಾತಿಗೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿ ಹರಾಜು ಮಾಡಿ ಅಲ್ಲಿಂದ ಬರುವ ಹಣವನ್ನು ಬ್ಯಾಂಕಿಗೆ ಕೊಡಿಸುವ ಜವಾಬ್ದಾರಿ ತಮ್ಮದಾಗಿದೆ ಎಂದು ತಿಳಿಸಲಾಗಿದೆ.
ಈ ಸಮಯದಲ್ಲಿ ರಮೇಶ್ ಜಾರಕಿಹೊಳಿ ಅವರು ಹರಿಯಂತ್ ಸಹಕಾರಿ ಬ್ಯಾಂಕಿಗೆ 20 ಕೋಟಿ ಸಾಲ ಹಾಗೂ ಬಡ್ಡಿ ಸೇರಿ ಒಟ್ಟು 35 ಕೋಟಿ ನೀಡಬೇಕು. ಹೀಗಾಗಿ ಬ್ಯಾಂಕಿನವರು ಅವರು NCLT ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಿ, ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯಿಂದ ತಮಗೆ ಬರಬೇಕಾದ ಸಾಲ ಕೊಡಿಸಿ ಎಂದು ಮನವಿ ಮಾಡಿದರು. ನಂತರ ನ್ಯಾಯಾಧಿಕರಣ ದಿವಾಳಿಯಾಗಿರುವ ಕಂಪನಿ ಆಸ್ತಿ ಹರಾಜು ಮಾಡಲು ಇನ್ಸಾರ್ವೆನ್ಸಿ ಎಂಬ ಸಂಸ್ಥೆಗೆ ಸೂಚಿಸುತ್ತಾರೆ.
ಈ ಹರಾಜು ಪ್ರಕ್ರಿಯೆ ಕುರಿತು ತಕರಾರು ಇದ್ದರೆ ಅದನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. ಆದರೆ ಈ ಜಾಹೀರಾತನ್ನು ಪತ್ರಿಕೆಗಳಲ್ಲಿ ಪ್ರಕಟಿಸದೇ, ಕೇವಲ ತಮ್ಮ ಜಯನಗರ ಕಚೇರಿ ಮುಂದೆ ಹಾಕಲಾಗಿದೆ. ಈ ಸಕ್ಕರೆ ಕಾರ್ಖಾನೆ ಇರುವುದು ಗೋಕಾಕ್ ತಾಲೂಕಿನಲ್ಲಿ ಆದರೆ ಈ ಪ್ರಕಟಣೆಯನ್ನು ಹಾಕಿರುವುದು ಬೆಂಗಳೂರಿನ ಜಯನಗರದ ಕಚೇರಿ ಮುಂದೆ ಎಂದು ಲಕ್ಷ್ಮಣ್ ವಿವರಿಸಿದರು.
ತಕರಾರು ಸಲ್ಲಿಸಲು ನೀಡಲಾಗಿದ್ದ ಅಂತಿಮ ದಿನಾಂಕ ನಿನ್ನೆಗೆ ಮುಕ್ತಾಯವಾಗಿದ್ದು, ಹರಿಯಂತ್ ಸಹಕಾರಿ ಬ್ಯಾಂಕ್ ನವರು ಆರ್ಬಿಟ್ರೇಟರ್ ಮೂಲಕ 1 ಸಾವಿರ ಎಕರೆ ಜಾಗದಲ್ಲಿ ನಿರ್ಮಾಣವಾಗಿರುವ ಕಂಪನಿ ಆಸ್ತಿಯ ಮೌಲ್ಯವನ್ನು ಮಾಡಲಾಗುತ್ತದೆ. ನಮಗಿರುವ ಮಾಹಿತಿ ಪ್ರಕಾರ ಈ ಆಸ್ತಿಯ ಮೊತ್ತ 900 ಕೋಟಿ. ಆದರೆ ಈ ಸಹಕಾರಿ ಬ್ಯಾಂಕಿನವರು ಈ ಆಸ್ತಿಯ ಮೌಲ್ಯವನ್ನು ಕೇವಲ 60 ಕೋಟಿಗೆ ಮಾಡಿಸುತ್ತಾರೆ.
ಈ ಹರಾಜು ಪ್ರಕ್ರಿಯೆಗೆ ಸರ್ಕಾರವಾಗಲಿ, ಅಪೆಕ್ಸ್ ಬ್ಯಾಂಕಿನವರಾಗಲಿ, ಅಲ್ಲಿನ ಸುತ್ತಮುತ್ತಲಿನವರಾಗಲಿ ಅಥವಾ ಅಲ್ಲಿನ ನೌಕರರಾಗಲಿ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಆಕ್ಷೇಪ ವ್ಯಕ್ತಪಡಿಸುವ ಕಾಲಾವಕಾಶ ನಿನ್ನೆಗೆ ಮುಕ್ತಾಯವಾಗಿದೆ.
ಈ ಮೂಲಕ 650 ಕೋಟಿ ಸಾಲವನ್ನು ತಮ್ಮ ಬೇನಾಮಿ ಹರಿಯಂತ್ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. 60 ಕೋಟಿ ಮೌಲ್ಯವನ್ನು ಮಾಡಿಸಲಾಗಿದೆ. ಆಗ NCLT ಅವರು ನಿಮಗೆ 35 ಕೋಟಿ ಬರಬೇಕಾಗಿದೆ, ಉಳಿದ 25 ಕೋಟಿಯನ್ನು ಕೊಟ್ಟರೆ ಈ ಆಸ್ತಿಯನ್ನು ನಿಮಗೆ ನೀಡಲಾಗುತ್ತದೆ ಎಂಬ ಅವಕಾಶ ನೀಡಲಾಗುತ್ತದೆ. ಆಗ ಇಡೀ ಆಸ್ತಿ ಬ್ಯಾಂಕಿನ ಪಾಲಾಗುತ್ತದೆ.
ಆದರೆ ಉಳಿದ ಅಪೆಕ್ಸ್ ಬ್ಯಾಂಕಿನ ಕತೆ ಏನು? ಈ ಕಂಪನಿ ದಿವಾಳಿಯಾಗಿದೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೇರೆ ಬ್ಯಾಂಕುಗಳಿಗೆ ಮೂರು ನಾಮ ಹಾಕುವ ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ.
ಸರ್ಕಾರ ಇಲ್ಲಿಯವರೆಗೂ ಯಾವುದೇ ಆಕ್ಷೇಪ ಸಲ್ಲಿಸಿಲ್ಲ. ಈ ಷಡ್ಯಂತ್ರದ ಹಿಂದೆ ರಾಜ್ಯ ಸರ್ಕಾರ, ಕೇಂದ್ರದ ಸಹಕಾರ ಸಚಿವಾಲಯದ ಮಂತ್ರಿಗಳು ಅಂದರೆ ಅಮಿತ್ ಶಾ ಅವರು ಇದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು ಕಳೆದ 10 ತಿಂಗಳಲ್ಲಿ 8 ಬಾರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ಇಷ್ಟು ಬಾರಿ ಭೇಟಿ ಮಾಡಿರುವುದು ಏಕೆ ಎಂಬುದು ಈಗ ಅರ್ಥವಾಗುತ್ತದೆ.
ಜನ ಸಾಮಾನ್ಯರು ಸಾಲ ಮಾಡಿ ವಾಹನ ಖರೀದಿ ಮಾಡಿದಾಗ ಒಂದು ತಿಂಗಳು ಇಎಂಐ ಕಟ್ಟಲಿಲ್ಲ ಎಂದರೆ ವಾಹನ ಜಪ್ತಿ ಮಾಡುತ್ತದೆ. ಆದರೆ ಈ ಕಂಪನಿಯನ್ನು ನೀವು 2017ರಲ್ಲೇ NPA ಎಂದು ಡಿಕ್ಲೇರ್ ಮಾಡುತ್ತೀರಿ. ಆದರೆ ಅದೇ ಕಂಪನಿ 2022ರ ಮಾರ್ಚ್ 31ಕ್ಕೆ ಅವರ ಆಡಿಟೆಡ್ ಖಾತೆ ಪರಿಶೀಲಿಸಿದರೆ ಆ ಕಂಪನಿ ಸುಮಾರು 60 ಕೋಟಿ ಲಾಭ ಮಾಡಿದೆ. ಇಂತಹ ಕಂಪನಿಯನ್ನು ದಿವಾಳಿ ಕಂಪನಿ ಎಂದು ಘೋಷಿಸಲಾಗುತ್ತದೆ.
ಇದೆಲ್ಲವನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂತಿರುವುದೇಕೆ? ಎಸ್.ಟಿ ಸೋಮಶೇಖರ್ ಅವರು ಸಹಕಾರ ಮಂತ್ರಿಯಾಗಿದ್ದು, ಅವರು ಏನು ಮಾಡುತ್ತಿದ್ದಾರೆ? ಬೊಮ್ಮಾಯಿ ಅವರು ಏನು ಮಾಡುತ್ತಿದ್ದಾರೆ? ಸತ್ಯ ಹರಿಶ್ಚಂದ್ರದ ಮೊಮ್ಮಕ್ಕಳಂತೆ ವರ್ತಿಸುವ ಸಿ.ಟಿ ರವಿ ಅವರೇ ಮುಂದಿನ ವಾರ ನಿಮ್ಮ ದಾಖಲೆಗಳನ್ನು ಬಹಿರಂಗ ಪಡಿಸುತ್ತೇನೆ. ನಾನು ಈ ವಿಚಾರವಾಗಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ನನಗೆ ಲೀಗಲ್ ನೊಟೀಸ್ ನೀಡುತ್ತಾರೆ. ಅಲ್ಲಿನ ಪೊಲೀಸ್ ಠಾಣೆಗಳಲ್ಲಿ ನನ್ನ ವಿರುದ್ಧ ಕೇಸ್ ಹಾಕಿಸುತ್ತಾರೆ. ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ? ಎಂದು ಆರೋಪಿಸಿದ್ದಾರೆ.
ಈ 660 ಕೋಟಿ ಜನ ಸಾಮಾನ್ಯರ ಹಣವೇ ಹೊರತು, ನಿಮ್ಮಪ್ಪನ ಮನೆ ಆಸ್ತಿಯಲ್ಲಿ. ಆದಾಯ ತೆರಿಗೆ ಇಲಾಖೆಯವರು ಒಂದು ತಿಂಗಳ ತಡವಾಗಿ ಐಟಿ ರಿಟರ್ನ್ಸ್ ಸಲ್ಲಿಸಿದ್ದಕ್ಕೆ 300 ಮೆಸೇಜ್ ಹಾಕಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಅವರು 200 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ, ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿಯವರಿಗೆ ಪ್ರತ್ಯೇಕ ಕಾನೂನು ಇದೆಯೇ?
ಬೆಳ್ಳಿ ಪ್ರಕಾಶ್ ಅವರೇ ನೀವು NCLTಗೆ ಯಾಕೆ ಅರ್ಜಿ ಹಾಕಲಿಲ್ಲ, ಬೆಳಗಾವಿ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ? ಈ ಪ್ರಕ್ರಿಯೆ ಆರಂಭಿಸದಂತೆ ಜಿಲ್ಲಾಧಿಕಾರಿಗಳ ಮೇಲೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ನೇರವಾಗಿ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಇದೆ. ರಮೇಶ್ ಜಾರಕಿಹೊಳಿ ಅವರು ಉದ್ದೇಶಿತ ಸುಸ್ಥಿದಾರನಾಗಿದ್ದು, ಜನಸಾಮಾನ್ಯರ 660 ಕೋಟಿ ಹಣವನ್ನು ಮೋಸ ಮಾಡಲಾಗುತ್ತಿದೆ.
ಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರ ಕುಟುಂಬದಲ್ಲಿ ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹೊಣೆ ಎನ್ನುತ್ತಾರೆ. ಇದು ಎಂತಹ ದುರಂತ. ಸಿ.ಟಿ ರವಿ ಅವರೇ ನಾನು ನಿಮ್ಮ ಬಿಜೆಪಿ ಕಚೇರಿಗೆ ನಾನು ಈ ದಾಖಲೆಗಳನ್ನೆಲ್ಲ ತೆಗೆದುಕೊಂಡು ಬರುತ್ತೇನೆ. ನೀವು ನಿಮ್ಮ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಂಡು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ.
ಇಡಿ ಏನು ಮಾಡುತ್ತಿದೆ? 50 ಲಕ್ಷ, ಒಂದೂವರೆ ಕೋಟಿ ಡಿಫಾಲ್ಟರ್ ಆಗಿದ್ದಕ್ಕೆ ಅಜಿತ್ ಪವಾರ್ ಅವರನ್ನು ಬಂಧಿಸುವ ಹಂತಕ್ಕೆ ಹೋಗಿದ್ದೀರಿ. ಆದರೆ ಲ್ಲಿ ನಿಮ್ಮ ನಾಯಕರಿಗೆ ಒಂದು ನೊಟೀಸ್ ಕೊಡಲು ಸಾಧ್ಯವಿಲ್ಲವೇ? 2017ರಲ್ಲಿ ಇವರ ಸಂಸ್ಥೆಯನ್ನು NPA ಎಂದು ಹೇಗೆ ಘೋಷಣೆ ಮಾಡಿದಿರಿ. ಪ್ರತಿ ವರ್ಷ ಲಾಭಾಂಶ ತೋರುತ್ತಿರುವ ಕಂಪನಿಯನ್ನು ದಿವಾಳಿ ಎಂದು ಹೇಗೆ ತೀರ್ಮಾನಿಸಿದಿರಿ? ಈ ವಿಚಾರವಾಗಿ ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ.
ಸರ್ಕಾರ ಹಾಗೂ ಸಹಕಾರ ಇಲಾಖೆ ಈ ಹರಾಜು ಪ್ರಕ್ರಿಯೆ ಕುರಿತು NCLTಗೆ ಆಕ್ಷೇಪಣಾ ಅರ್ಜಿ ಸಲ್ಲಿಸಬೇಕು. ನೊಟೀಸ್ ಜಾರಿ ಮಾಡಿ ಇಡೀ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ಮಾಡಬೇಕು.

2017ರಲ್ಲಿ ನಿಮ್ಮ ಸರ್ಕಾರವೇ ಅಧಿಕಾರಿದಲ್ಲಿತ್ತು, ಆಗ ನಿಮ್ಮ ಬಳಿ ಮಾಹಿತಿ ಇರಲಿಲ್ಲವೇ, ‘ಈ ಕಂಪನಿ NPA ಎಂದು ಘೋಷಣೆ ಆದಾಗ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ಆದರೆ ಆಗ ರಾಜ್ಯ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿರಲಿಲ್ಲ. 2019ರಲ್ಲಿ ಧಾರವಾಡ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅದರ ಆಧಾರದ ಮೇಲೆ ಪ್ರಕ್ರಿಯೆ ಮಾಡಲಾಗುತ್ತಿದೆ. ಸಾಲ ವಸೂಲಿ ಮಾಡಲು ಅದರದೇ ಆದ ಪ್ರಕ್ರಿಯೆ ಇವೆ. ಈ ವಿಚಾರದಲ್ಲಿ ಸರ್ಕಾರ ಆಕ್ಷೇಪಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಬಂದಾಗ ಯಾಕೆ ತನ್ನ ಅರ್ಜಿಯನ್ನು ಸಲ್ಲಿಸುತ್ತಿಲ್ಲ ಎಂದು ನಾವು ಪ್ರಶ್ನೆ ಮಾಡುತ್ತಿದ್ದೇವೆ. ಇದರ ಉದ್ದೇಶವೇನು? ಇನ್ನು ಈ ಸಾಲ ವಸೂಲಾತಿ ಪ್ರಕ್ರಿಯೆ ಆರಂಭವಾಗಿದ್ದು, 2019ರಿಂದ ಅಲ್ಲ, 2021ರ ಡಿಸೆಂಬರ್ ನಿಂದ. ಈ ಸಂದರ್ಭದಲ್ಲಿ ಆಕ್ಷೇಪಕ್ಕೆ ಆಹ್ವಾನ ಕೊಟ್ಟಾಗ ಸರ್ಕಾರ ಆಕ್ಷೇಪ ಅರ್ಜಿ ಸಲ್ಲಿಸಬೇಕಿತ್ತು ಎಂಬುದು ನಮ್ಮ ಬಲವಾದ ವಾದ. ಸಾಲ ತೆಗೆದುಕೊಂಡಿರುವ ಎಲ್ಲರ ಮೇಲೂ ನಾವು ಪ್ರಶ್ನೆ ಮಾಡಲು ಆಗುವುದಿಲ್ಲ. ಅಂದು ಅವರು ಕೇವಲ ಸಾಲ ಮಾಡಿದ್ದರು, ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆ ಸಾಲವನ್ನೇ ಮೋಸ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದು, ಇದನ್ನು ನಾವು ಪ್ರಶ್ನಿಸುತ್ತಿದ್ದೇವೆ’ ಎಂದರು.
ರಮೇಶ್ ಜಾರಕಿಹೊಳಿ ಹಾಗೂ ಹರಿಯಂತ್ ಬ್ಯಾಂಕಿಗೆ ಹೇಗೆ ಸಂಬಂಧ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬ್ಯಾಂಕಿನ ಮಾಲೀಕ ಅಭಿನಂದನ್ ಪಾಟೀಲ್ ಅವರು ರಮೇಶ್ ಜಾರಕಿಹೊಳಿ ಅವರ ಅತ್ಯಂತ ಆಪ್ತರಾಗಿದ್ದಾರೆ. ಅವರು ರಮೇಶ್ ಜಾರಕಿಹೊಳಿ ಅವರ ಬೇನಾಮಿ ಆಗಿದ್ದಾರೆ. ಈ 900 ಕೋಟಿ ಆಸ್ತಿಯನ್ನು ಹರಿಯಂತ್ ಬ್ಯಾಂಕಿಗೆ ಬರೆಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ’ ಎಂದು ಉತ್ತರಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಈ ಸಾಲ ಪಡೆಯಲು ಬೇರೆಯವರ 12 ಸಾವಿರ ಎಕರೆ ಜಮೀನನ್ನು ಅಡವಿಟ್ಟಿದ್ದಾರೆ ಎಂಬ ಪ್ರಶ್ನೆಗೆ, ‘ಬ್ಯಾಂಕಿನವರು ಹಣ ವಸೂಲಿ ಮಾಡಲು ಹರಾಜು ಹಾಕುವಾಗ ಅಡವಿಟ್ಟಿರುವ ಜಮೀನು ಅವರದ್ದೋ ಅಥವಾ ಬೇರೆಯವರದ್ದೋ ಎಂಬುದು ಬೇಕಾಗಿಲ್ಲ’ ಎಂದರು.
ರಮೇಶ್ ಜಾರಕಿಹೊಳಿ ಅವರಂತೆಯೇ ನಿಮ್ಮ ನಾಯಕರು ಸಾಕಷ್ಟು ಮಂದಿ ಸಾಲ ಪಡೆದಿದ್ದಾರೆ ಎಂಬ ಪ್ರಶ್ನೆಗೆ, ‘ಅವರು ಸಾಲ ಪಡೆದಿರಬಹುದು ಆದರೆ ಅವರು NPA ಆಗಿಲ್ಲ. ಸಾಲ ತೆಗೆದುಕೊಂಡು ಮೋಸ ಮಾಡುವವರು ಯಾವುದೇ ಪಕ್ಷದವರಾಗಿರಲಿ, ಶಿಕ್ಷೆ ಆಗಬೇಕು. ನಾನು ಇಲ್ಲಿ ಮಾತನಾಡುತ್ತಿರುವುದು NPA ಎಂದು ಘೋ,ಣೆಯಾಗಿ ಹರಾಜು ಪ್ರಕ್ರಿಯೆಯಲ್ಲಿ ಮೋಸ ಮಾಡುತ್ತಿರುವುದರ ಬಗ್ಗೆ’ ಎಂದು ಉತ್ತರಿಸಿದರು.




