ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ವರಿಷ್ಠರು ಸೂಚಿಸಿದ್ದಾರಾ? ಮೇ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರಾ? ಹೊಸ ಸಂಪುಟ ರಚನೆ ರಾಜ್ಯದಲ್ಲಿ ಆಗಲಿದೆಯಾ ಎಂಬಿತ್ಯಾದಿ ಹತ್ತು ಹಲವು ಅನುಮಾನಗಳು ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿವೆ.
ಇದಕ್ಕೆ ಪೂರಕವೆಂಬಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆತಂಕ ಮತ್ತು ಗೊಂದಲದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಮೇ 9 ರಾತ್ರಿ ದೆಹಲಿಗೆ ಸಿಎಂ ಬಸವರಾಜ್ ಬೊಮ್ಮಾಯಿ ತೆರಳುವ ಸಾಧ್ಯತೆಗಳು ನಿಶ್ಚಲವಾಗಿವೆ.
ಇದುವರೆಗೂ ಕೇಂದ್ರ ಮಂತ್ರಿಗಳು, ಪಕ್ಷದ ಹೈಕಮಾಂಡ್ ಅವರ ಯಾವುದೇ ರೀತಿಯಲ್ಲಿ ಸಮಯಾಕಾಶ ನಿಗಧಿಯಾಗದಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನುವ ಮಾತುಗಳು ಅವರ ಆಪ್ತ ವಲಯದಿಂದ ಕೇಳಿಬರುತ್ತಿವೆ.
ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಜೊತೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಹಸ್ಯ ಸಭೆ ನಡೆಸಲಾಗಿತ್ತು.
ಈ ಸಭೆಯಲ್ಲಿ ತಮ್ಮ ಸ್ಥಾನವನ್ನು ಯಾವ ರೀತಿಯಲ್ಲಿ ಉಳಿಸಿಕೊಳ್ಳಬೇಕು ಎನ್ನುವುದರ ಕುರಿತು ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಹೈಕಮಾಂಡ್ ಮೇಲೆ ಯಾವ ರೀತಿಯಲ್ಲಿ ಒತ್ತಡವನ್ನು ಹೇರಬೇಕು ಎನ್ನುವುದು ಕೂಡ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸ್ಥಾನ ಉಳಿಸಿ ಕೊಳ್ಳಲು ಬೊಮ್ಮಾಯಿ ಅವರಿಂದ ಶತಪ್ರಯತ್ನ ನಡೆಸುತ್ತಿದ್ದು, ಕೇಂದ್ರ ಸಚಿವರು, ಆರ್ ಎಸ್ ಎಸ್ ನಾಯಕರ ರಹಸ್ಯ ಭೇಟಿ ಮಾಡಿ ಕುರ್ಚಿ ಉಳಿಸಿಕೊಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ವಾರದಲ್ಲಿ ೧೫ ಕ್ಕೂ ಹೆಚ್ಚು ಪ್ರಮುಖ ನಾಯಕರಿಂದ ಹೈ ಕಮಾಂಡ್ ಮೇಲೆ ಪ್ರಭಾವ ಬೀರುವ ಯತ್ನ ಮತ್ತು ಲಾಭಿ ನಡೆಸಿರುವ ಸಿಎಂ, ಮಾಜಿ ಪ್ರಧಾನಿಯೊಬ್ಬರಿಂದಲೂ ಬಿಜೆಪಿ ಹೈ ಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರವನ್ನೂ ಮಾಡಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿಯೊಬ್ಬರು ಕರೆ ಮಾಡಿದ್ದು, ಬಸವರಾಜ್ ಬೊಮ್ಮಾಯಿ ಕುರ್ಚಿ ರಕ್ಷಣೆಗೆ ಅವರೂ ಕೂಡ ಶತಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.




