ಚಾಮರಾಜನಗರ: ಸಿಎಂ ಬಸವರಾಜ ಬೊಮ್ಮಾಯಿ ಅವರು ಓರ್ವ ಕಾಮನ್ ಮ್ಯಾನ್ ಸಿಎಂ, ಸರಳ ಮುಖ್ಯಮಂತ್ರಿಯೊಬ್ಬರು ಯಾವ ರೀತಿ ಜನಪರ ಆಗಿರುತ್ತಾರೆ ಎಂಬುದಕ್ಕೆ ಬೊಮ್ಮಾಯಿ ಅವರೇ ಉದಾಹರಣೆ. ಬೊಮ್ಮಾಯಿ ಅವರು ನಿರೀಕ್ಷೆಗೆ ಮೀರಿ ಅತೀ ವೇಗವಾಗಿ ಕೆಲಸ ಮಾಡುತ್ತಿದ್ದಾರೆ, ಅವರ ಸ್ಪೀಡಿಗೆ ಕೆಲವರು ಶಾಕ್ ಆಗಿದ್ದಾರೆ ಎಂದು ವಸತಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ನಾಯಕರುಗಳೇ ಸಿಎಂ ಬೊಮ್ಮಾಯಿ ಅವರ ಕೆಲಸ ಮೆಚ್ಚಿಕೊಂಡಿದ್ದಾರೆ. ಹೀಗಿದ್ದ ಅವರ ಬದಲಾವಣೆ ಎಂಬುದು ಕೇವಲ ಮಾಧ್ಯಮಗಳ ಕಟ್ಟುಕಥೆ, ಇನ್ನಾದರೂ ಸಿಎಂ ಬದಲಾವಣೆ ಎಂಬ ಸುದ್ದಿಯನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.
ಪಕ್ಷಕ್ಕೆ ಯತ್ನಾಳ್ ಹೇಳಿಕೆ ಮುಜುಗರ ತಂದಿದೆ
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ, ಅವರೊಬ್ಬ ಸೀನಿಯರ್ ಲೀಡರ್, ಈ ರೀತಿ ಅವರು ಮಾತನಾಡಬಾರದೆಂದು ಸಚಿವ ಸೋಮಣ್ಣ ಸ್ವಪಕ್ಷದ ನಾಯಕನ ವಿರುದ್ಧ ಸಿಡಿಮಿಡಿಗೊಂಡರಲ್ಲದೆ, ತಾಕೀತು ಮಾಡಿದರು.
ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು, ಅತೀ ದೊಡ್ಡ ಸಮುದಾಯದ ನಾಯಕರಾಗಿದ್ದಾರೆ ಅವರು ಈ ರೀತಿ ಮಾತನಾಡುವುದು ಸರಿಯಲ್ಲ, ಇದನ್ನೂ ಮುಂದುವರೆಸಬಾರದು, ಈಗಾಗಲೇ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ನೋಟೀಸ್ ನೀಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಶಿಸ್ತು ಸಮಿತಿ ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂದರು.

ಇದೇ ವೇಳೆ, ಪಾಕ್ ಪರ ಘೋಷಣೆಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಯಾರೋ ಕಿಡಿಗೇಡಿಗಳು ಮಾಡುವ ಕೃತ್ಯದಿಂದ ಸಮಾಜದ ಶಾಂತಿ ಕದಡುತ್ತಿದೆ, ಇದರಿಂದ ಇಡೀ ಸಮಾಜವನ್ನು ದೂಷಿಸುವುದು ಸರಿಯಲ್ಲ, ಆಯಾ ಸಮಾಜದ ಮುಖಂಡರು ಕಿಡಿಗೇಡಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.




