ಅರುಣ್ ಸಿಂಗ್ ಕೇಂದ್ರದ ಏಜೆಂಟ್,ದಲ್ಲಾಳಿ : ರಾಜ್ಯಕ್ಕೆ ಕಲೆಕ್ಷನ್ ಗಾಗಿ ಭೇಟಿ : ಎಚ್.ಡಿ. ಕುಮಾರಸ್ವಾಮಿ

ಮೈಸೂರು : ಕರ್ನಾಟಕ ರಾಜ್ಯ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ.ಪಾಪ ಅವನಿಗೆ ಏನ್ ಗೊತ್ತು.!? ಆತ ರಾಜ್ಯಕ್ಕೆ ಬಂದಿರೋದು ದುಡ್ಡು ವಸೂಲಿ ಮಾಡೋದಿಕ್ಕೆ.ಕಲೆಕ್ಷನ್ ಮಾಡುವುದಕ್ಕಾಗಿ ಬಂದಿರುವ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತನಾ ಡಿದ್ದಾನೆ ಎಂದು ಏಕವಚನದಲ್ಲಿಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಕಠು ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅವನು ರಾಜ್ಯಕ್ಕೆ ಬಂದಿದ್ದು ಹಣ ಸಂಗ್ರಹ ಕ್ಕಾಗಿ.ಅವನಿಗೆ ಇಲ್ಲಿಯ ರಾಜಕಾರಣ ಗೊತ್ತಿಲ್ಲ.ಹೀಗಾಗಿ ಜೆಡಿಎಸ್ ಮುಳುಗುತ್ತಿರುವ ಹಡಗು ಎಂದಿದ್ದಾರೆ.ಮುಳುಗುತ್ತಿರುವುದು ಬಿಜೆಪಿ,ಜೆಡಿಎಸ್ ಬಗ್ಗೆ ಮಾತನಾಡಬೇಡಿ.ರಾಜ್ಯಕ್ಕೆ ಕೇಂದ್ರದಿಂದ ಬರುವ ಇಂಥಹ ದಲ್ಲಾಳಿಗಳಿಗೆ ನಾಯಕರು ಹೇಳ ಬೇಕು.ಇಲ್ಲಿನ ವಾಸ್ತವವನ್ನ ರಾಜ್ಯ ನಾಯಕರು ತಿಳಿಸಿ ಹೇಳಬೇಕು.ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೀವಾ? ಅರ್ಧ ರಾತ್ರಿಯಲ್ಲಿ ಸಾ.ರಾ. ಮಹೇಶ್ ಮನೆಗೆ ಬಂದಿದ್ಯಾರು? ಜೆಡಿಎಸ್ ಬಗ್ಗೆ ಮಾತಾಡಿದವರು ಇಂದು ಏನಾಗಿದ್ದಾರೆ ಎಂಬುದು ಇತಿಹಾಸ.ಜೆಡಿಎಸ್​ನ ಫ್ಯೂಸ್ ಕೀಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಖಾರವಾಗಿಯೇ ತಿರುಗೇಟು ನೀಡಿದ್ದಾರೆ.

ಮೇಕೆದಾಟು ಯೋಜನೆ,ಕೃಷ್ಣಾ ಮೇಲ್ದಂಡೆ,ಮಹದಾಯಿ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಲು ಕರ್ನಾಟಕ ಸಂಸದರಿಗೆ ಮೂಳೆ‌,ಎಲುಬು ಎರಡೂ ಇಲ್ಲ.ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು.ಆದರೆ ಅವರು ರಾಜ್ಯಕ್ಕೆ ಬಂದು ಸೂಟ್‌ಕೇಸ್ ತಗೊಂಡೋದ್ರೆ ಸಾಲದು.ಇಂತಹ ಸಮಸ್ಯೆಯನ್ನ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕ ಎಂದು ಚಾಟಿ ಬೀಸಿದ್ದಾರೆ.

More News