ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಹೊರಗಿಟ್ಟು ರಾಜ್ಯ ಬಿಜೆಪಿ ಮತ್ತು ಆರ್ ಎಸ್ ಎಸ್ ಮುಖಂಡರು ಮಹತ್ವದ ಸಭೆ ನಡೆಸಿದ್ದು, ಇದೀಗ ಪಕ್ಷದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ಸಂಜೆ ಬೆಂಗಳೂರಿನ ಕೇಶವ ಕೃಪದಲ್ಲಿ ನಡೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮರ್ ಕಟೀಲ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಶಾಸಕ ಸಿ.ಟಿ.ರವಿ ಹಾಗೂ ಇನ್ನಿತರ ಆರ್ ಎಸ್ ಎಸ್ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆದರೆ, ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಬಿ ಎಸ್ ವೈ ಅವರನ್ನು ಹೊರಗಿಟ್ಟಿದ್ದೇಕೆ? ಎಂಬ ಪ್ರಶ್ನೆ ಕಾಡತೊಡಗಿದೆ. ಅದಕ್ಕೂ ಮುನ್ನಾ ಬಿಜೆಪ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಬಿಎಸ್ ವೈ ಅವರಿಗೆ ಆಹ್ವಾನ ನೀಡಲಾಗಿತ್ತು. ಅಲ್ಲಿ ಅವರು ಮತ್ರನಿಗೆ ವಿಧಾನ ಪರಿಷತ್ ಟಿಕೇಟು ನೀಡಬೇಕೆಂದು ಮನವಿ ಮಾಡಿದ್ದರು.
ಇದೇ ಕಾರಣಕ್ಕೆ ಬಿ ಎಸ್ ವೈ ಅವರನ್ನು ಹೊರಗಿಡಲಾಗಿದೆಯಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬಂದಿವೆ. ಹಾಗೆಯೇ ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಬೇಕೆಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.
ಬಿಜೆಪಿ ನಡೆಯ ವಿರುದ್ಧ ಸಂಘದ ನಾಯಕ ಬೇಸರ
ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ಪಕ್ಷದ ನಡೆಯ ವಿರುದ್ಧ ಸಂಘದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸರ್ಕಾರ ರಚನೆಗೆ ಹೊರಗಡೆಯಿಂದ ಕರೆ ತರುತ್ತಿದ್ದೀರಾ, ಸರ್ಕಾರ ರಚನೆ ಮಾಡಬೇಕೆಂಬ ನಿಮ್ಮ ನಿಲುವು ಸ್ವಾಗತ, ಆದರೆ ಪಕ್ಷವನ್ನೇ ನಂಬಿಕೊಂಡವರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಘದಿಂದ ಬಂದು ಪಕ್ಷ ಸೇರಿಕೊಂಡವರ ಕಥೆಯೇನು? ಪಕ್ಷ ಕಟ್ಟುತ್ತಿರುವವರು ಸಂಘದ ಕಾರ್ಯಕರ್ತರು, ತಳಮಟ್ಟದಲ್ಲಿ ಪಕ್ಷ ಕಟ್ಟುತ್ತಿರುವವರಿಗೆ ಏನು ಉತ್ತರ ನೀಡಬೇಕು, ಬೇರೆಡೆಯಿಂದ ಬಂದವರಿಗೆ ಪಕ್ಷದ ತತ್ವ ಸಿದ್ಧಾಂತ ಗೊತ್ತಿಲ್ಲ, ಸಂಘದಿಂದ ಬಂದವರನ್ನು ಗುರುತಿಸಿ ಸ್ಥಾನಮಾನ ನೀಡಬೇಕಾಗಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಮುಂಬರವ ದಿನಗಳಲ್ಲಿ ನಮ್ಮ ಕಾರ್ಯಕರ್ತರನ್ನೇ ನಾಯಕರನ್ನಾಗಿ ಮಾಡೋಣ, ಮುಂದೆ ಪಕ್ಷ, ಸಂಘಕ್ಕೆ ದುಡಿದವರಿಗೆ ಸ್ಥಾನಮಾನ ನೀಡಿ ಎಂದು ಸಂಘದ ನಾಯಕರು, ಮುಖಂಡರುಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ ಎನ್ನಲಾಗಿದೆ. ಸಂಘದ ಮುಖಂಡರ ಈ ಮಾತಿಗೆ ನೆರೆದಿದ್ದ ಎಲ್ಲಾ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಕಾರ್ಯಕಾರಿಣಿ ಸಭೆ ಚಿತ್ರ……




