ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಂಬಂಧ ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಿಗೈಯಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಈ ಬಾರಿಯೂ ಕೂಡ ಯಾವುದೇ ರೀತಿಯಲ್ಲಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಲು ಅವರಿಗೆ ಅವಕಾಶ ಸಿಗಲಿಲ್ಲ. ಬದಲಾಗಿ ಬರಿಗೈಯಲ್ಲೆ ವಾಪಾಸ್ಸಾಗಬೇಕಾಗಿದೆ.
ನಿನ್ನೆ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಕರೆಯ ಮೇರೆಗೆ ದೆಹಲಿಗೆ ತೆರಳಿದ್ದರು. ಆದರೆ, ಅವರ ಭೇಟಿಗೆ ಕಾಲಾವಕಾಶ ದೊರಕಲೇ ಇಲ್ಲ. ಗುಜರಾತ್ ನಲ್ಲಿನ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿಯವರೆಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾದರೂ ಅವಕಾಶ ಸಿಗಲಿಲ್ಲ.
ಬೆಳಿಗ್ಗೆಯೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಆದರೆ, ಅದೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕೆಲಕಾಲ ಭೇಟಿ ಮಾಡಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಇದರಿಂದ ಮತ್ತೆ ಸಂಪುಟ ಕಸರತ್ತು ನೆನೆಗುದಿಗೆ ಬಿದ್ದಿದ್ದು,, ಸಚಿವಾಂಕ್ಷಿಗಳು ಮತ್ತೆ ನಿರಾಶೆಗೊಂಡಿದ್ದಾರೆ.
ಸದ್ಯ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಪರಿಷತ್ , ರಾಜ್ಯ ಸಭೆ ಮೇಲೆ ಕೇಂದ್ರೀಕರಿಸಲು ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದುಬಂದಿದ್ದು, ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಇನ್ನೂ ಎರಡು ವಾರದ ನಂತರವಷ್ಟೇ ಎಂಬ ಮಾಹಿತಿ ಹೊರಬಿದ್ದಿದೆ.
ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದರೂ ಯಾವೊಬ್ಬ ಸಚಿವ ಜನಸಾಮಾನ್ಯರ ನೆರವಿಗೆ ಧಾವಿಸದೇ, ಬೆಂಗಳೂರಿನಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಸಚಿವಾಂಕ್ಷಿಗಳಾದ ಶಾಸಕರು ವರಿಷ್ಠರ ಮೇಲೆ ಒತ್ತಡ ಹೇರಲು ಬೆಂಗಳೂರು ಮತ್ತು ನವದೆಹಲಿಯಲ್ಲಿ ತಂಗಿದ್ದು, ಅವರೂ ತಮ್ಮ ಕ್ಷೇತ್ರದ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಜನಸಾಮಾನ್ಯರು ಮಾತ್ರ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರ್ಕಾರದಿಂದ ಯಾವುದೇ ರೀತಿಯಲ್ಲಿ ಸ್ಪಂದನೇ ಸಿಗದೇ ಅವರು ಹಿಡಿಶಾಪ ಹಾಕುತ್ತಿದ್ದಾರೆ.

ಇನ್ನೊಂದೆಡೆ ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆಯಾಗಿಲ್ಲ. ಸುಪ್ರೀಂ ಕೋರ್ಟ್ ಬಿಬಿಎಂಪಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.
ಅಮಿತ್ ಶಾ ಅವರ ಸೂಚನೆಯಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತನಾಡಿ ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಸಭಾ ಚುನಾವಣೆಗೆ ಕಳುಹಿಸಲಾಗಿರುವ ಪಟ್ಟಿಯ ಬಗ್ಗೆ ವಿವರಗಳನ್ನು ನೀಡಲಾಗಿದೆ.

ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ 24 ಕಡೇ ದಿನಾಂಕ ವಾಗಿದ್ದು. ತುರ್ತಾಗಿ ನಿರ್ಣಯ ಗಳನ್ನು ಕೈಗೊಳ್ಳಬೇಕಿದೆ. ರಾಜ್ಯ ಸಭೆ ಚುನಾವಣೆಗೆ 31 ರವರೆಗೆ ಸಮಯಾವಕಾಶವಿದೆ. ಕೋರ್ ಕಮಿಟಿ ಚರ್ಚೆಯ ನಿರ್ಣಯಗಳ ಬಗ್ಗೆ ಅರುಣ್ ಸಿಂಗ್ ಅವರಿಗೆ ತಿಳಿಸಲಾಗಿದೆ.ಆದಷ್ಟು ಬೇಗನೆ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಮತ್ತೆ ಸಭೆ ನಡೆಸಲು ಮುಂದಾದ ಸಿಎಂ
ಬೆಂಗಳೂರಿಗೆ ತಲುಪುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಲು ಮಂದಾಗಿದ್ದಾರೆ. ಮಳೆಯಿಂದ ಆಗಿರುವ ತೊಂದರೆ ಕುರಿತು ಮಾಹಿತಿ ಪಡೆಯಲು ಮುಂದಾದ ಸಿಎಂ ಬೊಮ್ಮಾಯಿ, ಮಧ್ಯಾಹ್ನ ಮೂರು ಗಂಟೆಗೆ ಎಲ್ಲಾ ಡಿಸಿ, ಸಿಇಓ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಮಹತ್ವದ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿದ್ದಾರೆ.




