BJP CANDIDATE AIRLIFTED: ಪರಿಷತ್ ಚುನಾವಣೆ: ಮೂರು ಪಕ್ಷದಿಂದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಅಭ್ಯರ್ಥಿಯನ್ನ ಏರ್ ಲಿಫ್ಟ್ ಮಾಡಿದ ಬಿಜೆಪಿ

ಬೆಂಗಳೂರು : ಜೂನ್ ಮೂರರಂದು ವಿಧಾನ ಪರಿಷತ್ ಗೆ ನಡೆಯುವ ಏಳು ಸ್ಥಾನಗಳ ಚುನಾವಣೆಗೆ ಮೂರು ಪಕ್ಷಗಳಿಂದ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ.
ಸದ್ಯಕ್ಕೆ ವಿಧಾನ ಸಭೆಯಲ್ಲಿ ಇರುವ ಸದಸ್ಯರ ಸಂಖ್ಯಾಬಲದ ಆಧಾರದ ಮೇಲೆ ನಡೆಯುವ ಈ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ನಾಲ್ಕು, ಕಾಂಗ್ರೆಸ್ ಗೆ ಎರಡು ಮತ್ತು ಜೆಡಿಎಸ್ ಗೆ ಒಂದು ಸ್ಥಾನ ಸಿಗಲಿದೆ. ಅದೇ ರೀತಿಯಲ್ಲಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.
ಬಿಜೆಪಿಯಿಂದ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್ ಹಾಗೂ ಮಹಿಳಾ ಅಭ್ಯರ್ಥಿ ಹೇಮಲತಾ ನಾಯಕ್ ಅವರನ್ನು ಕಣಕ್ಕೆ ಇಳಿಸಿದೆ. ಇವರೆಲ್ಲರೂ ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದರಿಂದ ಇಂದು ತಮ್ಮ ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ ಅಭ್ಯರ್ಥಿಗೆ ಏರ್ ಲಿಫ್ಟ್
ಎಂಎಲ್ ಸಿ ಚುನಾವಣೆಗೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿತ್ತು. ಮಧ್ಯಾಹ್ನದವರೆಗೂ ಬಿಜೆಪಿಯ ಮಹಿಳಾ ಅಭ್ಯರ್ಥಿ ಆಗಮಿಸದೇ ಇದ್ದುದ್ದರಿಂದ ಅವರಿಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ, ಕರೆತರಲಾಗಿತ್ತು.

ಬಿಜೆಪಿ ರಾಜ್ಯಧ್ಯಕ್ಷರಿಂದ ಬಿ ಫಾರಂ ಪಡೆಯುತ್ತಿರುವ ನಾರಾಯಣಸ್ವಾಮಿ

ಹೇಮಲತಾ ನಾಯಕ್ ರನ್ನು ತುಮಕೂರಿನಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿತ್ತು. ಕೊಪ್ಪಳದಿಂದ ತುಮಕೂರಿನವರೆಗೆ ಕಾರಿನಲ್ಲಿ ಬಂದಿರುವ ಹೇಮಲತಾ, ಬೆಂಗಳೂರು ತಲುಪುವುದು ತಡವಾಗುವ ಹಿನ್ನೆಲೆಯಲ್ಲಿ ಏರ್ ಲಿಫ್ಟ್ ಮಾಡಲಾಗಿತ್ತು. ತುಮಕೂರಿನಿಂದ ಜಕ್ಕೂರು ಏರೋಡ್ರಂ ವರೆಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಅಬ್ದುಲ್ ಜಬ್ಬಾರ್ ಹಾಗೂ ನಾಗರಾಜ್ ಯಾದವ್ ಅವರು ಇಂದು ವಿಧಾನಸೌಧದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಾಗರಾಜ್ ಯಾದವ್ ಅವರ ನಾಮಪತ್ರಕ್ಕೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೂಚಕತಾಗಿದ್ದಾರೆ, ಅಬ್ದುಲ್‌ ಜಬ್ಬಾರ್ ಅವರ ನಾಮಪತ್ರಕ್ಕೆ ಎಂ ಬಿ ಪಾಟೀಲ್ ಹಾಗೂ ದೇಶಪಾಂಡೆ ಸೂಚಕರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ನಿಂದ ಇಬ್ಬರು ಕಾರ್ಯಕರ್ತರಿಗೆ ಟಿಕೇಟ್ ಕೊಟ್ಟಿದ್ದೇವೆ, ಮುಂದೆ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಪಕ್ಷ ಮಾಡುತ್ತೆ ಎಂದರು. ಮಹಿಳೆಯರಿಗೂ ಟಿಕೆಟ್ ಕೈತಪ್ಪಿದೆ, ಎರಡು ಸ್ಥಾನ ಇದ್ದದ್ದರಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.
ಜಮೀರ್ ಅಸಮಾಧಾನ
ಅಬ್ದುಲ್ ಜಬ್ಬಾರ್ ಅವರಿಗೆ ಅವಕಾಶ ನೀಡಿದ್ದಕ್ಕೆ ಶಾಸಕ ಜಮೀರ್ ಅಸಮಾಧಾನ ಹೊಂದಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಬ್ದುಲ್ ಜಬ್ಬಾರ್, ಜಮೀರ್ ಮತ್ತು ನನ್ನ ನಡುವೆ ಯಾವುದೇ ಅಸಮಧಾನ ಇಲ್ಲ, ಜಮೀರ್ ಜೊತೆ ಬೆಳಗ್ಗೆ ಮಾತನಾಡಿದ್ದೇನೆ, ಅವರು ಬೆಂಗಳೂರಿನಲ್ಲಿ ಇಲ್ಲ, ಹಾಗಾಗಿ ನಾಮಪತ್ರ ಸಲ್ಲಿಸಲು ಬಂದಿಲ್ಲ ಎಂದರು.
ಜೆಡಿಎಸ್ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ
ಜೆಡಿಎಸ್ ಪಕ್ಷದಿಂದ ಬಿ ಶರವಣ ಅವರಿಗೆ ಮೇಲ್ಮನೆ ಟಿಕೆಟ್ ಘೋಷಣೆಯಾಗಿದ್ದು, ಅವರು ಪಕ್ಷದಿಂದ ಬಿ ಫಾರಂಅನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಪಡೆದು ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಜೆಡಿಎಸ್ ಮೇಲ್ಮನೆ ಅಭ್ಯರ್ಥಿ ಶರವಣ ಮಾತನಾಡಿ, ನನ್ನ ಕೆಲಸ ಗಮನಿಸಿ ನನಗೆ ಪಕ್ಷದ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಮತ್ತೊಮ್ಮೆ ಕುಮಾರಣ್ಣ ಅವರನ್ನ ಸಿಎಂ ಸ್ಥಾನದಲ್ಲಿ ಕೂರಿಸಬೇಕು, ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

More News