ಬೆಂಗಳೂರು : ಕಳೆದ ಸುಮಾರು ಮೂರು ವರ್ಷಗಳಿಂದ ಚುನಾವಣೆ ನಡೆಯದೇ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಗೆ ಸುಪ್ರಿಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಗರಿಗೆದರಿದ ವಾತಾವರಣ ನೆಲೆಸಿದೆ.
ಪಾಲಿಕೆ ನೂತನ ಸದಸ್ಯರಿಗೆ ಸಭೆ ನಡೆಸುವ ಉದ್ದೇಶದಿಂದ ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಸ್ವರ್ಶ ನೀಡಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. ಬಿಬಿಎಂಪಿಯ ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ಪಾಲಿಕೆ ಅಡಳಿತಾಧಿಕಾರಿಯಿಂದ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ ಪುನರ್ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಕಳೆದ ಬಾರಿ 198 ವಾರ್ಡ್ ಇದ್ದ ಬಿಬಿಎಂಪಿ ,ಈ ಬಾರಿ 243 ವಾರ್ಡ್ ಗಳಿಗೆ ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲಿ ಕೌನ್ಸಿಲ್ ಕಟ್ಟಡವನ್ನೂ ಮರು ವಿನ್ಯಾಸದ ಜೊತೆ ಹೈಟೆಕ್ ತಂತ್ರಜ್ಞಾನ ಅಳವಡಿಕೆಗೆ ಸಿದ್ದತೆ ನಡೆಸಲಾಗುತ್ತಿದೆ. ಕೌನ್ಸಿಲ್ ಕಟ್ಟಡಕ್ಕೆ ಹೊಸ ಬ್ಲೂ ಪ್ರಿಂಟ್ ಸಿದ್ದ ಪಡಿಸಲಾಗಿದ್ದು, ಸುಮಾರು 10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ನಿರ್ಮಾಣಕ್ಕೆ ವಿನ್ಯಾಸ ಸಿದ್ದಗೊಂಡಿದೆ.

ಇದುವರೆಗೂ 270 ಮಂದಿ ಕೂರಲು ಅವಕಾಶವಿದ್ದ ಕೌನ್ಸಿಲ್ ಸಭಾಂಗಣದಲ್ಲಿ ಪಾಲಿಕೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಶಾಸಕರು, ಸಂಸದರು ಪರಿಷತ್ ಸದಸ್ಯರಿಗೆ ಸೀಮಿತವಾಗಿತ್ತು. ಇದೀಗ 364 ಜನರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಪಾಲಿಕೆ ಕೌನ್ಸಿಲ್ ನಲ್ಲಿ ಮಾಡಲಾಗುತ್ತಿದೆ.
ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ, ಜೊತೆಗೆ ಸೌಂಡ್ ಪ್ರೂಪ್ ಸಭಾಂಗಣ, ಕೌನ್ಸಿಲ್ ಹೌಸ್ ನಲ್ಲಿ ಸಿಸಿ ಕ್ಯಾಮಾರ ಅಳವಡಿಕೆ, ಸಾರ್ವಜನಿಕರಿಗೆ ಹಾಗೂ ಮಾದ್ಯಮದವರಿಗೆ ಪ್ರತ್ಯೇಕ ಅಸನದ ವ್ಯವಸ್ಥೆ ಸೇರಿದಂತೆ ಹೈಟೆಕ್ ಸ್ಪರ್ಶ ನೀಡಲು ಪಾಲಿಕೆ ಮುಂದಾಗಿದೆ.




