KAPIL SIBAL QUITS CONGRESS: ಕಾಂಗ್ರೆಸ್ ತೊರೆದ ಹಿರಿಯ ನಾಯಕ ಕಪಿಲ್ ಸಿಬಲ್: ಎಸ್ ಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ನಾಮಪತ್ರ

ಲಖನೌ : ಕಳೆದ ಎರಡು ವರ್ಷಗಳಿಂದ ನಾಯಕತ್ವ ಭಿನ್ನಾಭಿಪ್ರಾಯ ಹೊಂದಿದ್ದ ಹಿರಿಯ ಸಂಸದ ಹಾಗೂ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ತೊರೆದಿದ್ದಾರೆ. ಕಾಂಗ್ರೆಸ್ ಜತೆಗಿನ ಸುಮಾರು 30 ವರ್ಷಗಳ ಒಡನಾಟವನ್ನು ಕೊನೆಗೊಳಿಸಿರುವುದಾಗಿ ಅವರು ಘೋಷಿಸಿದ್ದಾರೆ.
ಮೇ 16ರಂದೇ ಕಾಂಗ್ರೆಸ್ ತೊರೆದಿರುವುದಾಗಿ ತಿಳಿಸಿದ 74 ವರ್ಷದ ಖ್ಯಾತ ವಕೀಲ, ರಾಜಕಾರಣಿ ಕಪಿಲ್ ಸಿಬಲ್ ತಿಳಿಸಿದ್ದಾರೆ. ಕಪಿಲ್ ಸಿಬಲ್ ಅವರು ಉತ್ತರ ಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಬೆಂಬಲ ನೀಡಿದೆ.
ಪಂಜಾಬ್ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸುನೀಲ್ ಜಾಖಡ್ ಹಾಗೂ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಸಿಬಲ್ ರಾಜೀನಾಮೆ ಕಾಂಗ್ರೆಸ್ ಗೆ ದೊಡ್ಡ ಮಟ್ಟದಲ್ಲಿ ಪೆಟ್ಟುಬಿದ್ದಂತಾಗಿದೆ. ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಜರ್ಜಿರಿತವಾಗಿರುವ ಕಾಂಗ್ರೆಸ್ ಗೆ ಇದು ಮತ್ತೊಂದು ಆಘಾತವಾಗಿದೆ.
ಕಾಂಗ್ರೆಸ್ ಗಾಂಧಿ ಕುಟುಂಬದ ನಾಯಕತ್ವದಿಂದ ಬದಲಾಗಬೇಕು ಎಂದು ಗಾಂಧಿ ಕುಟುಂಬದ ವಿರುದ್ಧ ಸತತ ಟೀಕೆಗಳನ್ನು ಮಾಡುತ್ತಿದ್ದ ಅವರ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯಸ್ವದ ಅವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು 11 ಸದಸ್ಯ ಬಲವನ್ನು ಹೊಂದಿದ್ದು ಮೂರು ರಾಜ್ಯ ಸಭಾ ಸ್ಥಾನಗಳಲ್ಲಿ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿಬಲ್ ಸಮಾಜವಾದಿ ಪಕ್ಷದ ಬೆಂಬಲ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಿಬಲ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಮಾಜವಾದಿ ಪಕ್ಷದ ಸದಸ್ಯರಾದರೆ ಅಲ್ಲಿನ ಶಿಸ್ತನ್ನು ಪಾಲಿಸಬೇಕಾಗುತ್ತದೆ, ಅದಕ್ಕಾಗಿಯೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ಹೋರಾಡುತ್ತಿದ್ದೇನೆ ಎಂದು ಸಿಬ್ಬಲ್ ನಾಮಪತ್ರ ಸಲ್ಲಿಸಿದ ಬಳಿಕ ತಿಳಿಸಿದ್ದಾರೆ.
ಸುಮಾರು 31 ವರ್ಷಗಳ ಸಂಬಂಧ ಕಡಿದುಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ, ರಾಜೀವ್ ಜಿ ಅವರ ಕಾರಣದಿಂದ ನಾನು ಕಾಂಗ್ರೆಸ್ ಸೇರಿದ್ದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಪಿಲ್ ಸಿಬಲ್ ಅವರು ಪಕ್ಷ ತೊರೆದಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ, ರಾಷ್ಚ್ರ ರಾಜಕೀಯದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ವಿವಿಧ ರಾಜ್ಯಗಳಲ್ಲಿ ಹಲವು ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಆದ್ದರಿಂದ ಇದೇನೂ ಅಂತಹ ಪರಿಣಾ ಬೀರುವುದಿಲ್ಲ ಎಂದು ಕೊಚ್ಚಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣಿಗೋಪಾಲ್ ತಿಳಿಸಿದ್ದಾರೆ.

More News