ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರ ಸಂಬಂಧ ರಾಜ್ಯ ಸರ್ಕಾರದ ನಡೆಗೆ ಲಿಂಗಾಯತ ಮಠಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ಪತ್ರವನ್ನು ಸಾಣೆಹಳ್ಳಿ ಶ್ರೀಗಳು ಬರೆದಿದ್ದು, ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಬಗ್ಗೆಯೇ ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ತಜ್ಙರು, ಸಾಮಾಜಿಕ ಕಾಳಜಿಯುಳ್ಳವರು ಈ ಪರಿಷ್ಕರಣ ಸಮಿತಿಯಲ್ಲಿ ಇರಬೇಕು, ಆದರೆ, ಅದನ್ನ ಬಿಟ್ಟು ಒಂದು ವರ್ಗದವರೇ ಇದರಲ್ಲಿ ಇದ್ದಾರೆ ಎನ್ನುವುದ ಮೇಲ್ನೋಟಕ್ಕೆ ಬಹಳ ಸ್ಪಷ್ಟವಾಗುತ್ತದೆ ಎಂದು ದೂರಿದ್ದಾರೆ.
9ನೇ ತರಗತಿಯಲ್ಲಿ ಬಸವಣ್ಣನವರ ಪಾಠವಿದೆ, ಆದರೆ ಪ್ರಮುಖ ಸಾಲುಗಳನ್ನೇ ತೆಗೆಯಲಾಗಿದೆ, ಬಸವಣ್ಣ ಸಮಾಜ ಸುಧಾರಣೆಗೆ ಹೋರಾಡಿದವರು, ವೈದಿಕ ಧರ್ಮದ ಆಚರಣೆಗಳನ್ನ ಕಡಿಮೆಮಾಡಿದವರು, ಮೌಲ್ಯಾಧರಿತ ಸರಳ ವೀರಶೈವ ಸಿದ್ಧಾಂತ ಅಳವಡಿಸಿಕೊಂಡವರು, ಜಾತಿ ವ್ಯವಸ್ಥೆಯ ಕಡು ವಿರೋಧಿಯಾಗಿದ್ದವರು, ತಮ್ಮ ಯಜ್ಞೋಪವೀತವನ್ನೇ ಕಿತ್ತೆಸೆದವರು, ನಂತರ ಅವರು ಅನುಭವ ಮಂಟಪದ ಕಡೆ ಹೊರಟವರು, ಹಣ, ಅಧಿಕಾರ ಎಲ್ಲವನ್ನೂ ಬಿಟ್ಟು ಸಮಾಜದ ಸುಧಾರಣೆಗಾಗಿ ಶ್ರಮಿಸಿದವರು, ಈ ವಾಕ್ಯಗಳನ್ನೇ ಪಠ್ಯದಿಂದ ತೆಗೆದುಹಾಕಲಾಗಿದೆ. ಇದು ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ ಎಂದು ಶ್ರೀಗಳು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಈ ಪಠ್ಯವನ್ನು ತಡೆಹಿಡಿಯಬೇಕು, ಇಲ್ಲವಾದರೆ ನಾಡಿನಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಸಾಣೆಹಳ್ಳಿ ಜಗದ್ಗುರುಗಳಾದ ಪಂಡಿತಾರಾಧ್ಯ ಶಿವಾಚಾರ್ಯರು ಎಚ್ಚರಿಕೆ ನೀಡಿದ್ದಾರೆ.





