STRICT ACTION WILL TAKE: ಸಚಿವರ ಮನೆ ಮುಂದೆ NSUI ಕಾರ್ಯಕರ್ತರ ಪ್ರತಿಭಟನೆ ದಾಂಧಲೆ ಖಂಡನೀಯ ನಿರ್ದಾಕ್ಷಿಣ ಕ್ರಮ: ಸಿಎಂ

ಬೆಂಗಳೂರು : ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ತಿಪಟೂರಿನ ಮನೆಯ ಆವರಣಕ್ಕೆ ನುಗ್ಗಿ ಎನ್ ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆ ಮಾಡಿ ದಾಂಧಲೆ ನಡೆಸಿರುವುದು ಖಂಡನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಟ್ವೀಟ್ ಮಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಶಿಕ್ಷಣ ಪ್ರೇಮಿಗಳಿಗೆ ಇದು ಶೋಭೆ ತರುವಂತಹದಲ್ಲ, ಈ ಕುಕೃತ್ಯ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಿಕ್ಷಣ ಸಚಿವರ ಮನೆಗೆ ದಾಳಿ ಯತ್ನ- ನಳಿನ್‍ಕುಮಾರ್ ಕಟೀಲ್ ಖಂಡನೆ
ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆ ಮೇಲೆ ಕಾಂಗ್ರೆಸ್ ಮತ್ತು ಎನ್‍ಎಸ್‍ಯುಐ ಕಾರ್ಯಕರ್ತರು ದಾಳಿ ಮಾಡಲು ಮುಂದಾದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಎನ್‍ಎಸ್‍ಯುಐ, ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾಗಿದೆ. ಕಾಂಗ್ರೆಸ್ ಹಾಗೂ ಎನ್‍ಎಸ್‍ಯುಐ ಕಾರ್ಯಕರ್ತರು ಇಂದು ಮನೆಗೆ ದಾಳಿ ಮಾಡಿದಲ್ಲದೇ ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದರು. ಇದನ್ನು ಪೊಲೀಸರು ತಕ್ಷಣ ತಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಮೂಲಕ ಕಾಂಗ್ರೆಸ್‍ನವರ ಹತಾಶ ಮನೋಭಾವನೆ ಅನಾವರಣಗೊಂಡಿದೆ. ಸೈದ್ಧಾಂತಿಕವಾಗಿ ಜನರ ನಡುವೆ ನಿಂತು ತಮ್ಮ ವಿಚಾರ ಹೇಳುವಲ್ಲಿ ಕಾಂಗ್ರೆಸ್‍ನವರು ವಿಫಲರಾಗಿದ್ದಾರೆ. ಕಾಂಗ್ರೆಸ್ ಮುಖಂಡರು ಹಿಂದಿನಿಂದಲೂ ಗಲಾಟೆ ಮಾಡುವ ಪ್ರವೃತ್ತಿಯನ್ನೇ ತನ್ನದಾಗಿಸಿಕೊಂಡಿದ್ದಾರೆ ಎಂದಿದ್ದಾರೆ.
ಸಚಿವರ ಮನೆಗೆ ನುಗ್ಗುವ, ಬೆಂಕಿ ಹಾಕುವ ಪ್ರಯತ್ನ- ಸಿ.ಟಿ.ರವಿ ಖಂಡನೆ
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರಿನ ಮನೆಗೆ ಇವತ್ತು ಮಧ್ಯಾಹ್ನ ಕೆಲವು ಕಾಂಗ್ರೆಸ್ ಪ್ರಚೋದಿತ ಕಿಡಿಗೇಡಿಗಳು ನುಗ್ಗಿ ಹಲ್ಲೆ ನಡೆಸುವ ಮತ್ತು ಬೆಂಕಿ ಹಾಕುವ ಪ್ರಯತ್ನ ಮಾಡಿದ್ದನ್ನು ಖಂಡಿಸುತ್ತೇನೆ ಎಂದು ಶಾಸಕ ಸಿ.ಟಿ. ರವಿ ಅವರು ತಿಳಿಸಿದರು.


ಪ್ರಜಾಪ್ರಭುತ್ವದಲ್ಲಿ ಸಂವಾದ ಹಾಗೂ ಚರ್ಚೆ ಮೂಲಕ ಅಭಿಪ್ರಾಯ ರೂಪಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದೆ. ಆದರೆ, ಸಚಿವರ ಧ್ವನಿಯನ್ನು ಹತ್ತಿಕ್ಕಲು ಬೆದರಿಸುವುದು, ದೌರ್ಜನ್ಯ ನಡೆಸುವುದು ಮತ್ತು ಕೊಲೆ ಬೆದರಿಕೆ ಹಾಕಿ ಮನೆಗೆ ಬೆಂಕಿ ಹಾಕುವ ಹೀನ ಕೃತ್ಯಕ್ಕೆ ಕೈ ಹಾಕುವ ಮನೋಭಾವವು ಪ್ರಜಾಪ್ರಭುತ್ವ ವಿರೋಧಿ. ಇದು ತಾಲಿಬಾನ್‍ಗಳು ನಡೆಸುವ ಕೃತ್ಯ ಎಂದು ಆಕ್ಷೇಪಿಸಿದರು.

More News