SHAME FOR THE STATE: ಬಿಜೆಪಿಯವರ ಜಾಹಿರಾತು ರಾಜ್ಯಕ್ಕೆ ಅವಮಾನ: ರಾಜ್ಯಕ್ಕೆ ನೀಡಿದ್ದು ಅತ್ಯಲ್ಪ, ಕೇಂದ್ರ ದೋಚಿದ್ದು ಅಪಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ನೀಡಿದೆ ಎಂದು ಬಿಜೆಪಿಯವರು ನೀಡುತ್ತಿರುವ ಜಾಹಿರಾತು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಬಿಜೆಪಿಯವರು ನಮ್ಮ ರಾಜ್ಯದ ಜನರನ್ನೇನು ದಡ್ಡರು, ಯೋಚಿಸುವ ಶಕ್ತಿ ಇಲ್ಲದವರು ಎಂದುಕೊಂಡಿದ್ದಾರಾ? ಈ ಬಿಜೆಪಿಯವರ ತಲೆ ಸರಿ ಇದೆಯಾ? 2014 ರಿಂದ ಇದುವರೆಗೆ 8 ವರ್ಷಗಳಲ್ಲಿ ರಾಜ್ಯಕ್ಕೆ 1,29 ಲಕ್ಷ ಕೋಟಿ ರೂಗಳನ್ನು ನರೇಂದ್ರ ಮೋದಿಯವರು “ಕೊಡುಗೆ” ನೀಡಿದ್ದಾರೆ ಎಂದು ಪ್ರತಿ ನಿತ್ಯ ಜಾಹಿರಾತು ನೀಡಲಾಗುತ್ತಿದೆ. ಕೊಡುಗೆ ಎಂಬ ಪದ ಬಳಸಲು ಮೋದಿಯವರೊ ಇಲ್ಲ ಬಿಜೆಪಿಯವರೊ ಅವರ ಸ್ವಂತ ಮನೆಯಿಂದ ತೆಗೆದು ಖುಷಿಗೆ ಗಿಫ್ಟು ಕೊಡುವಂತೆ ಏನಾದರೂ ರಾಜ್ಯಕ್ಕೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರಕ್ಕೆ ಏನಾದರೂ ಬೆನ್ನು ಮೂಳೆ ಇದ್ದರೆ ಮೊದಲು ಈ ಜಾಹಿರಾತಿಗೆ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಯಾಕೆಂದರೆ ಕಳೆದ 8 ವರ್ಷಗಳಲ್ಲಿ ಮೋದಿಯವರ ರಾಜ್ಯ ವಿರೋಧಿ ಧೋರಣೆಯಿಂದ ನಾವು ಬಹಳಷ್ಟನ್ನು ಕಳೆದುಕೊಂಡಿದ್ದೇವೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ 8 ವರ್ಷಗಳಲ್ಲಿ ನಮ್ಮ ರಾಜ್ಯದಿಂದ ಕನಿಷ್ಟ ಎಂದರೂ 19 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಒಂದರ್ಥದಲ್ಲಿ ದೋಚಿಕೊಂಡಿದೆ ಎಂದರೂ ಸರಿಯೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿ ಟಿಪ್ಸು ಕೊಟ್ಟಂತೆ ಕೆಲವು ಯೋಜನೆಗಳಿಗೆ ಕೊಟ್ಟಿರುವ 1.29 ಲಕ್ಷ ಕೋಟಿ ಅನುದಾನಗಳನ್ನು ಕೊಡುಗೆ ಎಂದು ಹೇಳಿ ರಾಜ್ಯದ ಸ್ವಾಭಿಮಾನವನ್ನು ದೆಲ್ಲಿಯ ಕಾಲ ಕೆಳಗೆ ಹಾಕಿರುವ ರಾಜ್ಯ ಬಿಜೆಪಿಗರಿಗೆ ಸ್ವಾಭಿಮಾನ ಎಂಬುದು ಏನಾದರೂ ಇದೆಯೆ? ಎಂಬ ಪ್ರಶ್ನೆಯನ್ನು ಈ ನಾಡಿನ ಪ್ರಜ್ಞಾವಂತರು ಕೇಳುತ್ತಿದ್ದಾರೆ. ನರೇಗಾ ಮುಂತಾದ ಯೋಜನೆಗಳಲ್ಲಿ ಜನರ ಬೆವರಿಗೆ ಕೊಡುವ ಪ್ರತಿಫಲವನ್ನು ಈ ಬಿಜೆಪಿಯವರು ಕೊಡುಗೆ ಎನ್ನುತ್ತಾರಲ್ಲ, ಇವರು ಮನುಷ್ಯರಾ ಎಂಬುದು ನನ್ನ ಅನುಮಾನ ಎಂದು ಕಿಡಿಕಾರಿದ್ದಾರೆ.

ಕರ್ನಾಟಕವು ದೇಶದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುತ್ತಿರುವ ಎರಡನೆ ರಾಜ್ಯ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಜಿಎಸ್‍ಟಿ ಪಾವತಿಸುತ್ತಿರುವ ರಾಜ್ಯ ನಮ್ಮದು. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಯ ಪಾವತಿಯಲ್ಲೂ ಸಹ ನಮ್ಮ ರಾಜ್ಯವು ನಿರಂತರವಾಗಿ ಎರಡು ಅಥವಾ ಮೂರನೆ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಕಳೆದ 8 ವರ್ಷಗಳ ಸರಾಸರಿ ತೆರಿಗೆ ಸಂಗ್ರಹ ಪ್ರಮಾಣ ಶೇ.6 ರಷ್ಟು ಮಾತ್ರ ಇದೆ. ಇದರಿಂದಾಗಿ ರಾಜ್ಯದ ಆರ್ಥಿಕತೆ ಸಂಕಷ್ಟದ ಸುಳಿಗೆ ಸಿಲುಕಿ ಸಾಲಗಾರ ರಾಜ್ಯವಾಗುತ್ತಿದೆ. ಇದರ ಜೊತೆಗೆ ಬಿಜೆಪಿಯವರ 40 ಪರ್ಸೆಂಟ್ ಕಮಿಷನ್‍ನಿಂದಾಗಿ ರಾಜ್ಯ ದಿವಾಳಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More News