BJP IS MURDERING AGRICULTURE: ಕೃಷಿಯ ಕೊಲೆ ಹಾಗೂ ಸುಳ್ಳು ಹೇಳುವುದೇ ಬಿಜೆಪಿಯ ಸಾಧನೆ : ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷಗಳ ಸಾಧನೆಯೆಂದರೆ ಕೃಷಿ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿ, ಅದನ್ನು ಕಾರ್ಪೊರೇಟ್ ಬಂಡವಾಳದವರ ಕಾಲ ಕೆಳಕ್ಕೆ ತಳ್ಳಿರುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ಈ ಸಂಬಂಧ ಸುಧೀರ್ಘ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಕಳೆದ 8 ವರ್ಷಗಳಲ್ಲಿ ಮೋದಿಯವರು ಹೇಳಿದ ಸುಳ್ಳುಗಳಿಗೆ ಲೆಕ್ಕವೇ ಇಲ್ಲ. ಅವುಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದೂ ಸೇರಿದೆ ಎಂದು ಕಿಡಿಕಾರಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 28-2-2016 ರಂದು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಭಾಷಣ ಮಾಡುವಾಗ 2022 ರ ಒಳಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಘೊಷಣೆ ಮಾಡಿದರು. ಆ ನಂತರ ಈ ಘೋಷಣೆಯನ್ನು ಬಜೆಟ್‍ನಲ್ಲಿ ಸೇರಿಸಲಾಯಿತು.
ನ್ಯಾಷನಲ್ ಸ್ಯಾಂಪಲ್ ಸರ್ವೆಯವರ ಪ್ರಕಾರ 2015-16 ರಲ್ಲಿ ಪ್ರತಿ ರೈತ ಕುಟುಂಬದ ವಾರ್ಷಿಕ ಆದಾಯ 96703 ರೂಗಳಷ್ಟಿರುತ್ತದೆಂದು ಅಂದಾಜಿಸಲಾಗಿತ್ತು. ಅಂದರೆ ಒಂದು ಕೃಷಿ ಕುಟುಂಬದ ತಿಂಗಳ ಸರಾಸರಿ ಆದಾಯ 8000 ರೂ ಎಂದಾಯಿತು. ಈ ಎಂಟು ಸಾವಿರ ರೂಪಾಯಿಗಳಲ್ಲಿ ಸರಾಸರಿ ಶೇ.43 ರಷ್ಟು ಕೂಲಿಯಿಂದ ಬರುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಸರ್ಕಾರದ ಡೇಟಾ ನೋಡಿದರೂ ಕೂಡ ಮನಮೋಹನಸಿಂಗ್ ಅವರ ಯುಪಿಎ ಅವಧಿಯಲ್ಲಿ ಕೃಷಿಯ ಜಿವಿಎ ಬೆಳವಣಿಗೆ ದರ ಸರಾಸರಿ ಶೇ. 4.6 ಕ್ಕಿಂತ ಹೆಚ್ಚಿಗೆ ಇತ್ತು. ಮೋದಿಯವರ ಕಾಲದಲ್ಲಿ ಕೇವಲ ಶೇ. 3.3 ರಷ್ಟಿದೆ. ಇಷ್ಟೆಲ್ಲ ಆದರೂ ಮೋದಿಯವರ ಸರ್ಕಾರ ಜಾಹಿರಾತು ಕೊಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ಕೃಷಿಕರ ಉಳಿವಿಗಾಗಿ ಎಂಎಸ್‍ಪಿ ಹೆಚ್ಚಿಸಿದ್ದೇವೆ ಎಂದು ಹೇಳುತ್ತಾರೆ. ವಾಸ್ತವವಾಗಿ ಯುಪಿಎ ಸರ್ಕಾರ ನಿಗಧಿಪಡಿಸಿದ ಬೆಂಬಲ ಬೆಲೆ ಮತ್ತು ಮೋದಿ ಸರ್ಕಾರ ನಿಗಧಿಪಡಿಸಿದ ಬೆಲೆಗಳ ನಡುವೆ ಅಗಾಧ ವ್ಯತ್ಯಾಸವಿದೆ ಎಂದರು.
ಕಾಂಗ್ರೆಸ್ ಪಕ್ಷವು ಭಾರತದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 6000 ಸಾವಿರ ರೂಪಾಯಿಯಂತೆ ವರ್ಷಕ್ಕೆ 72000 ರೂಪಾಯಿಗಳನ್ನು ಅವರ ಖಾತೆಗೆ ಹಾಕುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಮೋದಿಯವರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದು ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂಪಾಯಿಗಳನ್ನು ನೀಡುತ್ತಿದೆ. ಅಂದರೆ ತಿಂಗಳಿಗೆ 500 ಮಾತ್ರ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ನೀಡುವ ಹಣದ ಜೊತೆಗೆ ತಿಂಗಳಿಗೆ 333 ರೂಪಾಯಿ ನೀಡುವುದಾಗಿ ಯಡಿಯೂರಪ್ಪನವರು ಘೋಷಿಸಿದ್ದರು.
ಆದರೆ ಕಳೆದ ವರ್ಷದವರೆಗೆ 47 ಲಕ್ಷ ರೈತ ಕುಟುಂಬಗಳಿಗೆ ತಿಂಗಳಿಗೆ ನೀಡಿದ್ದು ಕೇವಲ 166 ರೂಪಾಯಿ ಮಾತ್ರ. ಇದು ಬಿಜೆಪಿಯವರ ಸಾಧನೆ ಎಂದು ಕಿಡಿಕಾರಿದರು.
ದೇಶದ ಕೃಷಿಕರ ಪರಿಸ್ಥಿತಿ ತೀವ್ರ ಆತಂಕದಲ್ಲಿದೆ. ರೈತರಲ್ಲಿ ಶೇ.87 ರಷ್ಟು ಕುಟುಂಬಗಳು ಸಣ್ಣ ಮತ್ತು ಅತಿಸಣ್ಣ ರೈತರಿದ್ದಾರೆ. ಪ್ರತಿ ದಿನ ದೇಶದಲ್ಲಿ ಸಾವಿರಾರು ರೈತರು ಕೃಷಿಯನ್ನು ತೊರೆಯುತ್ತಿದ್ದಾರೆಂದು ವರದಿಗಳು ಹೇಳುತ್ತಿವೆ ಎಂದು ತಿಳಿಸಿದರು.

ಕೊರೋನ ಅಟ್ಟಹಾಸ ಮಾಡುತ್ತಿದ್ದಾಗ ಮೋದಿಯವರು ಕರಾಳ ಕೃಷಿ ಕಾಯ್ದೆಗಳನ್ನು ತಂದು ಅದಾನಿ, ಅಂಬಾನಿಗಳಂಥ ಬೃಹತ್ ಕಾರ್ಪೊರೇಟ್ ಬಂಡವಾಳಿಗರಿಗೆ ಅನುಕೂಲ ಮಾಡಿಕೊಡಲು ಹೊರಟರು. ರೈತರು ನಡೆಸಿದ ಧೀರೋದಾತ್ತ ಹೋರಾಟದಿಂದಾಗಿ ಕಾಯ್ದೆಗಳನ್ನು ವಾಪಸ್ಸು ಪಡೆದರು. ಆದರೆ ನಮ್ಮ ರಾಜ್ಯದಲ್ಲಿ ಎಪಿಎಂಸಿಗಳು ಸಂಪೂರ್ಣ ಮುಳುಗಿ ಹೋಗುತ್ತಿದ್ದರೂ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿಲ್ಲ. ಫಲವತ್ತಾದ ಭೂಮಿ ಬಂಡವಾಳಿಗರ ಕೈ ಸೇರುತ್ತಿದ್ದರೂ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಹಿಂದಕ್ಕೆ ಪಡೆದಿಲ್ಲ. ಇದರ ಜೊತೆಗೆ ಕೃಷಿಗೆ ನೀಡುವ ಸಬ್ಸಿಡಿಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ ಎಂದರು.
ರೈತರು ತಮ್ಮ ಮನೆಗಳಲ್ಲಿನ ಚಿನ್ನವನ್ನು ಅಡ ಇಟ್ಟು ಸಾಲ ತರುತ್ತಿದ್ದಾರೆ. ಬೆಳೆ ಬಂದಾಗ ಬೆಲೆ ಸಿಗುತ್ತಿಲ್ಲ. ಸರ್ಕಾರದ ಭ್ರಷ್ಟಾಚಾರದಿಂದಾಗಿ ಕಳಪೆ ಔಷಧ, ಬೀಜ, ಗೊಬ್ಬರ ಮಾರುಕಟ್ಟೆಯಲ್ಲಿ ತುಂಬಿದೆ. ಇದನ್ನು ನಿಯಂತ್ರಣ ಮಾಡುವ ಶಕ್ತಿಯಾಗಲಿ, ಉದ್ದೇಶವಾಗಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಟೀಕಿಸಿದರು.

More News